ಒಂದು ವಾರದಿಂದ ಪ್ರಾರಂಭವಾದ ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ, ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯಿತು. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ತಲೆ ಬೋಳಿಸಲಾಯಿತು. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣಹಂಪಲು ಬಿಟ್ಟರೆ ಬೇರೆನನ್ನೂ ಸೇವಿಸದೆ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕಿ ವಿಶೇಷ ಪೂಜೆ ಸಲ್ಲ್ಲಿಸಲಾಯಿತು. ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರು ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಯಿತು.
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು ೪೮ ಹಳ್ಳಿಗಳಿಗೆ ಸಂಬಂಧಿಸಿದ ಅಡಿಬೈಲು ಶ್ರೀ ರಂಗನಾಥಸ್ವಾಮಿ ಬಿಂದಿಗಮ್ಮ ದೇವರ ಜಾತ್ರೆ ಅತ್ಯಂತ ವೈಭವದಿಂದ ನೆರವೇರಿತು.ಒಂದು ವಾರದಿಂದ ಪ್ರಾರಂಭವಾದ ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ, ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯಿತು. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ತಲೆ ಬೋಳಿಸಲಾಯಿತು. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣಹಂಪಲು ಬಿಟ್ಟರೆ ಬೇರೆನನ್ನೂ ಸೇವಿಸದೆ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕಿ ವಿಶೇಷ ಪೂಜೆ ಸಲ್ಲ್ಲಿಸಲಾಯಿತು. ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರು ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಯಿತು.ಶನಿವಾರ ಹೊಳೆ ದಡದಲ್ಲಿ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ಬಿಂದಿಗಮ್ಮನವರನ್ನು ಗಂಡನ ಮನೆಯಾದ ರಂಗನಾಥಸ್ವಾಮಿ ದೇವಾಲಯಕ್ಕೆ ಕಳುಹಿಸುವ ಸಂದರ್ಭ ಆಕರ್ಷಣೀಯವಾಗಿತ್ತು. ಕಳಸ ಹೊರಡುವ ಮುನ್ನ ಕುಂದೂರಿನ ಗ್ರಾಮಸ್ಥರನ್ನು ಭರತೂರು ಗ್ರಾಮಸ್ಥರು ಬರಮಾಡಿಕೊಂಡು ವಿಶೇಷ ಆತಿಥ್ಯ ನೀಡಿ ಗೌರವಿಸಿದರು. ಹೂವು ತುಳಸಿಯಿಂದ ಅಲಂಕೃತವಾದ ಹರಿವಾಣದಲ್ಲಿ ಬಿಂದಿಗಮ್ಮನವರ ಕಳಸವನ್ನು ತಲೆ ಬೋಳಿಸಿದ್ದ ಪೂಜಾರಿ ತಲೆ ಮೇಲೆ ಇಡಲಾಯಿತು. ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗುತ್ತಿದ್ದ ಕಳಸ ಹೊತ್ತವರು, ನಂತರದಲ್ಲಿ ತಲೆ ಮೇಲಿರುವ ಕಳಸವನ್ನು ಕೈಯಲ್ಲಿ ಹಿಡಿಯದೆ ಓಡಲು ಪ್ರಾರಂಭ ಮಾಡಿದರು. ಅಲ್ಲಿಂದ ಏಳು ಊರುಬಾಗಿಲನ್ನು ದಾಟಿಕೊಂಡು, ಸುಮಾರು ೧೦ ಕಿ. ಮೀ. ದೂರದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಕೇವಲ ಒಂದು ಗಂಟೆ ಸಮಯದಲ್ಲಿ ತಲುಪಿತು. ಪ್ರತಿ ಊರು ಬಾಗಿಲು ಬಳಿ ಅಕ್ಕಿ ಹಸೆ ಬರೆದು ಹಣ ಹಾಕಿದ್ದರು. ಬಾಗಿಲು ದಾಟುವ ಸಂದರ್ಭದಲ್ಲಿ ಕಳಸ ಹೊತ್ತವರು ತನ್ನ ಗದ್ದದಿಂದ ನೆಲದ ಮೇಲಿಟ್ಟ ಹಣವನ್ನು ಮುಟ್ಟಿದರು. ಕಳಸ ಮುಂದೆ ಹೋದ ಕೂಡಲೆ ನೆರೆದಿದ್ದವರು ಹಸೆ ಅಕ್ಕಿಯನ್ನು ಮುಗಿಬಿದ್ದು ತೆಗೆದುಕೊಂಡು ಪುನೀತರಾದರು. ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ ನಡೆಯಿತು. ನೆರೆದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಮಾಡಿ ಪುನೀತರಾದರು. ಭಕ್ತರಿಗೆ ಅನ್ನದಾನ ನೆರವೇರಿಸಾಯಿತು. ಹೊಲೆ ಬದಿಯಲ್ಲಿ ನಡೆದ ಬಿಂದಿಗಮ್ಮ ಜಾತ್ರೆ ಸಂದರ್ಭದಲ್ಲಿ ಕೆಲವು ಭಕ್ತರು ವಿಶೇಷ ಹರಕೆ ಸಲ್ಲಿಸಿದರು. ಹೇಮಾವತಿ ನದಿ ನೀರಿನಿಂದ ದೇವರಿಗೆ ಅಭಿಷೇಕ ಮಾಡುವುದರೊಂದಿಗೆ ಜಾತ್ರಾ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ನಂತರ ಉಗಾದಿ ಹಬ್ಬದ ಸಂದರ್ಭದಲ್ಲಿ ಭರತೂರು ಕಡೆಗೆ ಸೇರುವ ಸುಮಾರು ೧೦ ಗ್ರಾಮಗಳಲ್ಲಿ ಅಡ್ಡೆ ಉತ್ಸವ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ಕಂದಾಯ, ಪೊಲೀಸ್, ಅರಣ್ಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಭಕ್ತರಿಗೆ ತೊಂದರೆಯಾಗದಂತೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದರು.