ಅಡಿಬೈಲು ರಂಗನಾಥಸ್ವಾಮಿ ಜಾತ್ರೆ ಆರಂಭ

| Published : Feb 24 2024, 02:33 AM IST

ಸಾರಾಂಶ

ಆಲುರು ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಅಡಿಬೈಲು ಗ್ರಾಮದ ರಂಗಸ್ವಾಮಿ ಬೆಟ್ಟದ ಐತಿಹಾಸಿಕ ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ಫೆ.೨೫ ರವರೆಗೆ ನಡೆಯಲಿದೆ.

ಭರತೂರು ಹೊಳೆ ಬದಿಯಲ್ಲಿ ಜಾತ್ರೆ । 25ರ ವರೆಗೆ ನಡೆಯಲಿರುವ ಉತ್ಸವ । ಎರಡು ಹೋಬಳಿ ಧಾರ್ಮಿಕ ಸಂಬಂಧ ಬೆಸೆಯುವ ಹಬ್ಬ

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಅಡಿಬೈಲು ಗ್ರಾಮದ ರಂಗಸ್ವಾಮಿ ಬೆಟ್ಟದ ಐತಿಹಾಸಿಕ ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ಫೆ.೨೫ ರವರೆಗೆ ನಡೆಯಲಿದೆ.

ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು ೪೮ ಹಳ್ಳಿಗಳಿಗೆ ಸಂಬಂಧಿಸಿದ ಈ ಜಾತ್ರೆ ಸಂಕ್ರಾಂತಿ ಹಬ್ಬ ದಿನದಿಂದಲೆ ಪ್ರಾರಂಭವಾಗುತ್ತದೆ. ಸಂಕ್ರಾಂತಿ ಹಬ್ಬದ ದಿನ ಕುಂದೂರು ಹೋಬಳಿ ವ್ಯಾಪ್ತಿಯ ಸುಮಾರು ೨೦ ಗ್ರಾಮಗಳಿಗೆ ಅಡ್ಡೆ ದೇವರು ಹೋಗುತ್ತದೆ. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ ಏಳು ದಿನಗಳ ಮೊದಲು ಬೆಟ್ಟದಲ್ಲಿರುವ ದೇವಾಲಯಕ್ಕೆ ಕರೆತರಲಾಗುತ್ತದೆ.

ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ. ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯುತ್ತದೆ. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ತಲೆ ಬೋಳಿಸಿ, ಹಸೆ ಹಾಕಿ ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣ-ಹಂಪಲು ಬಿಟ್ಟರೆ ಬೇರೆನನ್ನೂ ಸೇವಿಸದೆ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಶ್ರೀ ರಂಗನಾಥಸ್ವಾಮಿಗೂ ಬಿಂದಿಗಮ್ಮನಿಗೂ ಮದುವೆ ಮಾಡಿ ಆ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷವಾಗಿದೆ.

ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕುವ ವಿಶೇಷ ಪೂಜೆ ಇರುತ್ತದೆ. ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರಿನ ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಗುವುದು. ಶನಿವಾರ ಹೊಳೆ ದಡದಲ್ಲಿ ಜಾತ್ರೆ ನಡೆಯುತ್ತದೆ. ಸಂಜೆ ಬಿಂದಿಗಮ್ಮನವರನ್ನು ಗಂಡನ ಮನೆಗೆ ಅಂದರೆ ರಂಗನಾಥಸ್ವಾಮಿ ದೇವಾಲಯಕ್ಕೆ ಕಳುಹಿಸುವ ಸಂದರ್ಭ ನೋಡಲೇಬೇಕಾದುದು. ಕಳಸ ಹೊರಡುವ ಮುನ್ನ ಕುಂದೂರಿನ ಗ್ರಾಮಸ್ಥರನ್ನು ಭರತೂರು ಗ್ರಾಮಸ್ಥರು ಬರಮಾಡಿಕೊಂಡು ವಿಶೇಷ ಆತಿಥ್ಯ ನೀಡಿ ಗೌರವಿಸುತ್ತಾರೆ.

ಹೂವು ತುಳಸಿಯಿಂದ ಅಲಂಕೃತವಾದ ಹರಿವಾಣದಲ್ಲಿ ಬಿಂದಿಗಮ್ಮನವರ ಕಳಸವನ್ನು ಪೂಜಾರಿ ತಲೆ ಮೇಲೆ ಇಡಲಾಗುತ್ತದೆ. ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗುತ್ತಿದ್ದ ಕಳಸ ಹೊತ್ತವರು, ನಂತರದಲ್ಲಿ ತಲೆ ಮೇಲಿರುವ ಕಳಸವನ್ನು ಕೈಯಲ್ಲಿ ಹಿಡಿಯದೆ ಓಡಲು ಪ್ರಾರಂಭ ಮಾಡುತ್ತಾರೆ. ಹೊಳೆಯಿಂದ ಸುಮಾರು ೧೦ ಕಿ. ಮೀ. ದೂರದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಏಳು ಊರು ಬಾಗಿಲಗಳನ್ನು ದಾಟಿಕೊಂಡು ಕೇವಲ ಮುಕ್ಕಾಲು ಗಂಟೆಯಲ್ಲಿ ತಲುಪುತ್ತಾರೆ.

ಊರು ಬಾಗಿಲಲ್ಲಿ ಅಕ್ಕಿ ಹಸೆ ಬರೆದು ಹಣ ಹಾಕಿರುತ್ತಾರೆ. ಬಾಗಿಲು ದಾಟುವ ಸಂದರ್ಭದಲ್ಲಿ ಕಳಸ ಹೊತ್ತವರು ತನ್ನ ಗದ್ದದಿಂದ ನೆಲದ ಮೇಲಿಟ್ಟ ಹಣವನ್ನು ಮುಟ್ಟುತ್ತಾರೆ. ಕಳಸ ಮುಂದೆ ಹೋದ ಕೂಡಲೆ ನೆರೆದಿದ್ದವರು ಹಸೆ ಅಕ್ಕಿಯನ್ನು ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ನೋಡಲು ಅತ್ಯಂತ ಕುತೂಹಲಕಾರಿಯಾಗಿರುತ್ತದೆ.

ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ ನಡೆಯುತ್ತದೆ. ಸೋಮವಾರ ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ. ನಂತರ ಉಗಾದಿ ಹಬ್ಬದ ಸಂದರ್ಭದಲ್ಲಿ ಭರತೂರು ಕಡೆಗೆ ಸೇರುವ ಸುಮಾರು ೧೦ ಗ್ರಾಮಗಳಲ್ಲಿ ಅಡ್ಡೆ ಉತ್ಸವ ನಡೆಯುತ್ತದೆ.

ಸ್ಥಳ ಪುರಾಣ:

ಒಬ್ಬ ಕೊರಮನು ಬಿದಿರಿನ ಗುಂಪೊಂದಕ್ಕೆ ಕತ್ತಿಯಿಂದ ಹೊಡೆಯುವಾಗ ಒಂದು ಬಂಡೆಗೆ ಏಟು ತಾಗಿ ಬಂಡೆಯಿಂದ ಒಂದು ಬದಿಯಲ್ಲಿ ಹಾಲು ಮತ್ತೊಂದು ಬದಿಯಲ್ಲಿ ರಕ್ತ ಬರುತ್ತದೆ. ಮನೆಯವರೊಂದಿಗೆ ಸ್ಥಳಕ್ಕೆ ಬಂದು ನೋಡಿದಾಗ ಬ್ರಹ್ಮದೇವನ ವಿಗ್ರಹ ಪತ್ತೆಯಾಗುತ್ತದೆ. ಆ ಉದ್ಭವ ಮೂರ್ತಿಯನ್ನು ವಿಷ್ಣುವರ್ಧನ ರಾಜನು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಹೊಯ್ಸಳ ದೊರೆ ವಿಷ್ಣುವರ್ಧನ ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ಬ್ರಹ್ಮದೇವನನ್ನೆ ರಂಗನಾಥನೆಂಬ ಹೆಸರಿನಿಂದ ಕರೆಯಲಾಯಿತು ಎನ್ನಲಾಗಿದೆ.

ಜಾತ್ರೆ ನಡೆಯುವ ಅಡಿಬೈಲಿನಲ್ಲಿ ಕಾಡಾನಗಳ ಹಾವಳಿಯಿದೆ. ಜಾತ್ರೆ ನಡೆಯುವ ಮೂರು ದಿನಗಳ ಕಾಲ ಮುಂಜಾಗ್ರತೆಯಿಂದ ಶಸ್ತ್ರಸಜ್ಜಿತ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಭಕ್ತರು ಧೈರ್ಯದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು.

ಬಿ.ಬಿ.ಯತೀಶ್, ವಲಯ ಅರಣ್ಯಾಧಿಕಾರಿ, ಆಲೂರು.

ಜಾತ್ರೆಯ ದಿನ ರಂಗನಾಥನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ಭಕ್ತರು.