ಸಾರಾಂಶ
ಶ್ರೀಡಾ.ನಿರ್ಮಲಾನಂದನಾಥಸ್ವಾಮೀಜಿ ಸರ್ವಾಲಂಕಾರಭೂಷಿತರಾಗಿ ಜ್ವಾಲಾಪೀಠಕ್ಕೆ ಪೂಜೆ ಸಲ್ಲಿಸಿ ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ನೆರೆದಿದ್ದ ಭಕ್ತರು ಕೈಲಾಸದಲ್ಲಿ ಪರಶಿವನನ್ನೇ ದರ್ಶನ ಮಾಡಿದ ಪುಣ್ಯವೆಂದು ಭಾವಿಸಿ ಶ್ರೀಗಳ ಜ್ವಾಲಾಪೀಠಾರೋಹಣವನ್ನು ಕಣ್ತುಂಬಿಕೊಂಡರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಸಂಜೆ ನಡೆದ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.ಶ್ರೀಮಠದ ಪೀಠಾಧ್ಯಕ್ಷರು ಜಾತ್ರಾ ಸಮಯದಲ್ಲಿ ಜ್ವಾಲಾಪೀಠಾರೋಣ ಮಾಡುವುದು ಸಂಪ್ರದಾಯ. ಶ್ರೀ ಕ್ಷೇತ್ರದಲ್ಲಿ ಪರಶಿವನು ಬಂದು ತಪಸ್ಸು ಮಾಡಿದ ಸ್ಥಳವೇ ಜ್ವಾಲಾಪೀಠ ಎಂಬ ಉಲ್ಲೇಖವಿದೆ.
ಪೀಠಾಧ್ಯಕ್ಷ ಶ್ರೀಡಾ.ನಿರ್ಮಲಾನಂದನಾಥಸ್ವಾಮೀಜಿ ಅವರು ಬುಧವಾರ ರಾತ್ರಿ ಸರ್ವಾಲಂಕಾರಭೂಷಿತರಾಗಿ ಜ್ವಾಲಾಪೀಠಕ್ಕೆ ಪೂಜೆ ಸಲ್ಲಿಸಿ ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ನೆರೆದಿದ್ದ ಭಕ್ತರು ಕೈಲಾಸದಲ್ಲಿ ಪರಶಿವನನ್ನೇ ದರ್ಶನ ಮಾಡಿದ ಪುಣ್ಯವೆಂದು ಭಾವಿಸಿ ಶ್ರೀಗಳ ಜ್ವಾಲಾಪೀಠಾರೋಹಣವನ್ನು ಕಣ್ತುಂಬಿಕೊಂಡರು.ಸಿದ್ಧಸಿಂಹಾಸನರೂಢರಾದ ಆದಿಶ್ರೀ:
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿನ್ನದ ಕಿರೀಟದೊಂದಿಗೆ ಸರ್ವಾಲಂಕಾರಭೂಷಿತರಾಗಿದ್ದ ನಿರ್ಮಲಾನಂದನಾಥಶ್ರೀಗಳು ಶ್ರೀಮಠದ ಸಿದ್ಧ ಸಿಂಹಾಸನವನ್ನೇರಿ ಭಕ್ತರಿಗೆ ದರ್ಶನ ನೀಡುವುದಕ್ಕೂ ಮುನ್ನ, ಸಹಸ್ರಾರು ಭಕ್ತರ ನಡುವೆ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಸಿದ್ಧಸಿಂಹಾಸನರೂಢರಾಗಿ ದರ್ಶನ ನೀಡಿದರು.ಈ ವೇಳೆ ಶ್ರೀಮಠದ ವೇದಪಂಡಿತರು, ವಟುಗಳು, ಷೋಡೋಶೋಪಚಾರ ಪೂಜೆ ಪುರಸ್ಕಾರ ನೆರವೇರಿಸಿದರು. ನಂತರ ಶ್ರೀಗಳು ಭಕ್ತರಿಗೆ ವಿಭೂತಿ ತಿಲಕವನ್ನಿಡುವ ಮೂಲಕ ಹರಸಿ ಆಶೀರ್ವದಿಸಿದರು.
ನಂತರ ಚಂದ್ರಮಂಡಲೋತ್ಸವ ಪೂಜೆ ನೆರವೇರಿತು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಸಾಧು ಸಂತರು ಹಾಗೂ ಸಹಸ್ರಾರು ಮಂದಿ ಭಕ್ತರು ಇದ್ದರು.ಸರ್ವಧರ್ಮ ಸಮ್ಮೇಳನ, ತೆಪ್ಪೋತ್ಸವ:
ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.13ರ ಬೆಳಗ್ಗೆ ಕ್ಷೇತ್ರಾಧಿದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ನಡೆಯಲಿದೆ. ಸಂಜೆ 6.30 ಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ನಾಡಿನ ಅನೇಕ ಮಠಾಧಿಪತಿಗಳು, ಧಾರ್ಮಿಕ ಮುಖಂಡರುಗಳು, ಗಣ್ಯರು ಭಾಗವಹಿಸುವರು. ಬಳಿಕ ಶ್ರೀ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ಪೋತ್ಸವ ಹಾಗೂ ಇಡೀ ರಾತ್ರಿ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮಹಾರಥೋತ್ಸವ:
ಹೋಳಿ ಹುಣ್ಣಿಮೆ ದಿನವಾದ ಮಾ.14ರ ಶುಕ್ರವಾರ ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀಯವರ ಅಡ್ಡಪಾಲಕಿ ಉತ್ಸವವು ಬಹಳ ವಿಜೃಂಭಣೆಯಿಂದ ಜರುಗಲಿದೆ.ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಹಸ್ರಾರು ಮಂದಿ ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಇದೇ ದಿನ ಸಂಜೆ 6 ಗಂಟೆಗೆ ವಿವಿಧ ಗ್ರಾಮಗಳ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣಿ ಬಳಿಕ ಶ್ರೀ ಸೋಮೇಶ್ವರ ಸ್ವಾಮಿ ಉತ್ಸವ ಜರುಗಲಿದೆ.