ಸಾರಾಂಶ
ಗೋಕರ್ಣ: ಯಕ್ಷಗಾನದ ಮೇಲಿನ ಅಭಿಮಾನ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದೂರ ಸರಿಯುತ್ತಿರುವ ಸಾಮಾಜಿಕ ಪ್ರಜ್ಞೆ ಮೂಡಿಸುವ ಯಕ್ಷಗಾನ ಕಲೆಯನ್ನು ಇಂದಿನ ತಲೆಮಾರಿನವರಿಗೆ ಅರಿವು ಮೂಡಿಸಲು ಅಡಿಗೋಣದ ಅಕ್ಷರ ಫೌಂಡೇಶನ್ ಯೋಜನೆ ಪ್ರಕಟಿಸಿದೆ.
೯೦ರ ದಶಕದ ಕಲಾವಿದರನ್ನು ಮತ್ತೆ ವೇದಿಕೆಗೆ ಆಮಂತ್ರಿಸಿ ಅವರ ಮೂಲಕ ಮಕ್ಕಳಿಗೆ ಯಕ್ಷಗಾನ ಪಾತ್ರ ಪರಿಚಯ ನಡೆಸುವ ಪ್ರಯತ್ನ ನಡೆಸಿದೆ.ಇದಕ್ಕಾಗಿ ಜನವರಿ ೧೧ರಂದು ಯಕ್ಷಗಾನ ಆಯೋಜನೆಯಾಗಿದೆ. ೯೦ರ ದಶಕ ಹೆಕ್ಕಮೇಳದ ಕಲಾವಿದರನ್ನು ಒಗ್ಗೂಡಿಸಲಾಗಿದ್ದು, ಅಡಿಗೋಣದಲ್ಲಿ ಎಲ್ಲರೂ ಒಟ್ಟಾಗಿ ಯಕ್ಷ ಪಾತ್ರ ನಿಭಾಯಿಸಲಿದ್ದಾರೆ. ಆ ಮೂಲಕ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಲಿದ್ದಾರೆ. ಖ್ಯಾತ ಯಕ್ಷಗಾನ ಕಲಾವಿದರು ಸಹ ಅವರ ಜತೆ ಸೇರಿ ಕುಣಿಯಲಿದ್ದು, ಈ ಯಕ್ಷ ವೇದಿಕೆಗೆ ಎಲ್ಲ ಬಗೆಯ ಸಿದ್ಧತೆ ಜೋರಾಗಿ ನಡೆದಿವೆ.ಅಷ್ಟಾಗಿ ಟಿವಿ- ಇಂಟರ್‌ನೆಟ್ ಭರಾಟೆಗಳಲ್ಲಿದ ೯೦ರ ದಶಕದಲ್ಲಿ ಯಕ್ಷಗಾನವೇ ಮನರಂಜನೆಯ ಮಾಧ್ಯಮ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಹ ಆಗ ಅನೇಕರು ಯಕ್ಷಗಾನವನ್ನು ಆಯ್ದುಕೊಳ್ಳುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಯಕ್ಷಗಾನ ನಡೆಯುತ್ತಿದೆ ಎಂದಾದರೆ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ರಾತ್ರಿ ಆಟ ಶುರುವಾದರೆ ಬೆಳಗ್ಗೆಯವರೆಗೂ ನಿದ್ರೆಗೆ ಜಾರದೇ ಪ್ರೇಕ್ಷಕರು ಯಕ್ಷ ಸೊಬಗು ಸವಿಯುತ್ತಿದ್ದರು. ಖ್ಯಾತ ಕಲಾವಿದರ ವೇದಿಕೆ ಪ್ರವೇಶವಾದಾಗ ಸಭೆಯ ತುಂಬ ಚಪ್ಪಾಳೆಗಳ ಸುರಿಮಳೆ ತಪ್ಪುತ್ತಿರಲಿಲ್ಲ.ಆ ದಿನಗಳನ್ನು ಮತ್ತೆ ನೆನಪಿಸುವ ಉದ್ದೇಶ ಅಕ್ಷರ ಫೌಂಡೇಶನ್ ಅವರದ್ದು. ಯಕ್ಷಗಾನ ಕಲೆಯಲ್ಲಿ ತಮ್ಮದೇ ಸಾಧನೆಗೈದು ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡು ಯಕ್ಷಸಿರಿ ಎಂದು ಗುರುತಿಸಿಕೊಂಡಿರುವ ಭಾಗವತ ಬೀರಣ್ಣ ಮಾಸ್ತರ್ ಎಂದೇ ಖ್ಯಾತರಾದ ನಿವೃತ್ತ ಶಿಕ್ಷಕ ಬೀರಣ್ಣ ನಾಯಕ ಅಡಿಗೋಣರವರ ನೇತೃತ್ವದಲ್ಲಿ ಜ. 11ರಂದು ಯಕ್ಷ ಪ್ರದರ್ಶನ ನಡೆಯಲಿದೆ.
ಹೊಸಬಣ್ಣ ಮಾಸ್ತರ್ ಕುದ್ರಗಿ, ಅನಂತ ಹಾವಗೋಡಿ ಗೋಕರ್ಣ, ಬೀರಪ್ಪ ಗೌಡ ಭಾವಿಕೋಡ್ಲ, ನಾರಾಯಣ ನಾಯ್ಕ ಭಾವಿಕೇರಿ, ಶಿವಾನಂದ ನಾಯಕ ಮತ್ತು ದೇವಾನಂದ ನಾಯಕರ ಜೋಡಿ ಹೊಸ ಪ್ರಯೋಗಕ್ಕೆ ಹೆಜ್ಜೆ ಇರಿಸಿದೆ. ಕೆ.ಎಚ್. ನಾಯಕ ಧಾರವಾಡ ಅವರು ಮುಮ್ಮೇಳದಲ್ಲಿದ್ದಾರೆ. ಬೊಮ್ಮಯ ಗಾಂವಕರ ಅವರ ಹಿಮ್ಮೇಳದ ಕೂಡುವಿಕೆಯಲ್ಲಿ ಶ್ರೀಕೃಷ್ಣ ವಿವಾಹ ಎಂಬ ಯಕ್ಷಗಾನ ಆಯೋಜಿಸಲಾಗಿದೆ.ಗಂಡುಕಲೆ: ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಯುವ ಪೀಳಿಗೆ ಮುಂದುವರಿಸಿಕೊಂಡು ಹೋಗುವ ಮೂಲಕ ಕಲೆ, ಬೆಳೆಸಿ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ. ೧೧ರಂದು ನಡೆಯವ ಯಕ್ಷಗಾನ ಪ್ರದರ್ಶನಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ಅಕ್ಷರ ಫೌಂಡೇಶನ್ ಅಡಿಗೋಣನ ಟ್ರಸ್ಟಿ ಮಂಜುನಾಥ ನಾಯಕ ತಿಳಿಸಿದರು.