ಒಳ್ಳೆಯ ಮನಸ್ಸಿನಲ್ಲಿ ಸಮಾಜಸೇವೆ ಮಾಡಿದರೆ ದೇವರು ಪ್ರತಿಫಲ ನೀಡುತ್ತಾನೆ. ದೇವಸ್ಥಾನದ ಅಭಿವೃದ್ಧಿಗೆ ದಾನಿಗಳ ಹಾಗೂ ಭಕ್ತರ ಸಹಕಾರ ಸದಾ ಇದೆ. ತುಳುನಾಡಿನ ಸಂಸ್ಕೃತಿ ಉಳಿಸಲು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಉತ್ತಮ ಕಾರ್ಯ ಎಂದು ಎಂಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ
ಮೂಲ್ಕಿ: ಒಳ್ಳೆಯ ಮನಸ್ಸಿನಲ್ಲಿ ಸಮಾಜಸೇವೆ ಮಾಡಿದರೆ ದೇವರು ಪ್ರತಿಫಲ ನೀಡುತ್ತಾನೆ. ದೇವಸ್ಥಾನದ ಅಭಿವೃದ್ಧಿಗೆ ದಾನಿಗಳ ಹಾಗೂ ಭಕ್ತರ ಸಹಕಾರ ಸದಾ ಇದೆ. ತುಳುನಾಡಿನ ಸಂಸ್ಕೃತಿ ಉಳಿಸಲು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಉತ್ತಮ ಕಾರ್ಯ ಎಂದು ಎಂಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಹೇಳಿದರು. ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭೋಜನ ಶಾಲೆ, ಹಾಗೂ ವಿಶಾಲ ಸಭಾಂಗಣದ ಲೋಕಾರ್ಪಣೆ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಅಭಯ ಚಂದ್ರ ಜೈನ್ ದೇವಸ್ಥಾನದ ನೂತನ ಸೌರ ವಿದ್ಯುತ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ ಮಾತನಾಡಿ, ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನವು ಅಭಿವೃದ್ಧಿಯತ್ತ ಸಾಗುತ್ತಿದ್ದು ಎ ಗ್ರೇಡ್ ದೇವಸ್ಥಾನಗಳ ಶ್ರೇಣಿ ಗೆ ಸೇರಿಸಲು ಸರ್ಕಾರಕ್ಕೆ ಮನವಿ ಮಾಡಿದರು. ದೇವಸ್ಥಾನದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ದಾನಿಗಳ ನೆಲೆಯಲ್ಲಿ ಅಡ್ವೊಕೇಟ್ ಮಹಾಬಲ ಶೆಟ್ಟಿ ಅವರನ್ನು ಪತ್ನಿ ಶಾಲಿನಿ ಶೆಟ್ಟಿ ಜೊತೆ ಸನ್ಮಾನಿಸಲಾಯಿತು. ಸಭಾಂಗಣದ ಗುತ್ತಿಗೆದಾರ ನಿತಿನ್ ಕೆ ಶೆಟ್ಟಿ ಕುಬೆವೂರು ಅವರನ್ನು ಗೌರವಿಸಲಾಯಿತು. ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಭಟ್, ಪುರುಷೋತ್ತಮ ಭಟ್, ಅಡ್ವೊಕೇಟ್ ಮಹಾಬಲ ಶೆಟ್ಟಿ, ಮುಂಬೈ ಕ್ರಿಕೆಟ್ ಎಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ. ಪಿ ವಿ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರ್ಯಾರ್, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಡಾ.ಶುಕ್ಲ ಸುರೇಂದ್ರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕಾಮೇಶ್ವರೀ ವಿಷ್ಣುಮೂರ್ತಿ ಭಟ್ ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪ ವಿಷ್ಣುಮೂರ್ತಿ ಭಟ್, ನಂದನಾ ಕುಬೆವೂರು ವಂದಿಸಿದರು.ಉಪನ್ಯಾಸಕ ವಿಶ್ವನಾಥ್ ರಾವ್ ನಿರೂಪಿಸಿದರು.