ಅದ್ಧೂರಿಯಾಗಿ ನೆರವೇರಿದ ಆದಿನಾಥರ ಜನ್ಮಕಲ್ಯಾಣೋತ್ಸವ

| Published : Jan 18 2025, 12:48 AM IST

ಅದ್ಧೂರಿಯಾಗಿ ನೆರವೇರಿದ ಆದಿನಾಥರ ಜನ್ಮಕಲ್ಯಾಣೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಜ. 15ರಿಂದ 26ರ ವರೆಗೆ ನಡೆಯುವ ಮಹಾಮಸ್ತಕಾಭಿಷೇಕ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತ ಶುಕ್ರವಾರ ಅಪಾರ ಸಂಖ್ಯೆಯ ಜನಸಾಗರದ ನಡುವೆ ದೇಶದ ಪ್ರಮುಖ ಜೈನ ಆಚಾರ್ಯರ ಸಮ್ಮುಖದಲ್ಲಿ ಭಗವಾನ್ ಆದಿನಾಥರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು.

ಹುಬ್ಬಳ್ಳಿ:

ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಜ. 15ರಿಂದ 26ರ ವರೆಗೆ ನಡೆಯುವ ಮಹಾಮಸ್ತಕಾಭಿಷೇಕ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತ ಶುಕ್ರವಾರ ಅಪಾರ ಸಂಖ್ಯೆಯ ಜನಸಾಗರದ ನಡುವೆ ದೇಶದ ಪ್ರಮುಖ ಜೈನ ಆಚಾರ್ಯರ ಸಮ್ಮುಖದಲ್ಲಿ ಭಗವಾನ್ ಆದಿನಾಥರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು.ವೇದಿಕೆ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಭಗವಾನ್ ಆದಿನಾಥ ತೀರ್ಥಂಕರರ ನೂತನ ಶಿಲಾಪ್ರತಿಮೆ ಎದುರು ಸೇರಿದ ಇಂದ್ರಸಭೆ ಮತ್ತು ಆದಿನಾಥರ ಜನ್ಮವೃತ್ತಾಂತದ ದೃಶ್ಯಾವಳಿಗಳು ನೆರೆದ ಭಕ್ತಗಣವನ್ನು ಭಾವಪರವಶವಾಗುವಲ್ಲಿ ಯಶಸ್ವಿಯಾಯಿತು. ಎಂಟು ಕುಮಾರಿಯರು ಮಂಗಲಾಚರಣ ಹಾಡಿಗೆ ನರ್ತಿಸಿದ ನಂತರ ಇಂದ್ರದಂಪತಿಗಳನ್ನು ಛತ್ರ, ಚಾಮರ, ವಾದ್ಯಮೇಳಗಳ ನಡುವೆ ವೈಭವದಿಂದ ವೇದಿಕೆಗೆ ಕರೆತರಲಾಯಿತು.

ಇಂದ್ರ ಇಂದ್ರಾಣಿಯರು ಆದಿನಾಥರ ಜನ್ಮ ವಾರ್ತೆ ಕೇಳಿ ಸಂತಸಪಡುವುದು, ಕುಬೇರ ದಂಪತಿಗಳ ಜತೆ ಭೂಲೋಕಕ್ಕೆ ಆಗಮಿಸುವುದು. ಅಲ್ಲಿ ಶಿಶು ಆದಿನಾಥರನ್ನು ಎತ್ತಿಕೊಂಡು ಆಡಿಸುವುದು ಮೊದಲಾದ ಕಥಾ ಭಾಗಗಳು ವೇದಿಕೆಯ ಮೇಲೆ ಅಭಿನಯಸಲ್ಪಟ್ಟವು. ವಾರಾಂಗನೆಯರು ಜನ್ಮನಂತರ ಆದಿನಾಥ ಪ್ರತಿಮೆಯ ಶುದ್ಧೀಕರಣ ನೆರವೇರಿಸಿದರು. ಪಂಡಿತರಿಂದ ಪ್ರತಿಮೆಗೆ ಪುಷ್ಪಸಮರ್ಪಣೆ ಮತ್ತು ಪ್ರತಿಷ್ಠಾಪನೆ ವಿಧಿ ವಿಧಾನಗಳು ಜರುಗಿದವು.

ಭಗವಾನ್ ಆದಿನಾಥರ ಪ್ರತಿಮೆ ಶಾಶ್ವತ:

ಸಾನ್ನಿಧ್ಯ ವಹಿಸಿದ್ದ ವರೂರು ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿ, ಮಾನವ ಜನ್ಮಕ್ಕೆ ಅಶಾಶ್ವತ. ಆದರೆ, ಭಗವಾನ್ ಆದಿನಾಥರ ಕಲ್ಲಿನ ಪ್ರತಿಮೆ ಶಾಶ್ವತ ಎಂದ ಅವರು, ಆದಿನಾಥರ ಜನ್ಮವೃತ್ತಾಂತದಲ್ಲಿ ಬರುವ ಪಾಂಡುಕ ಶಿಲೆಯನ್ನು ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಸುಮೇರು ಪರ್ವತವು ನೆನಪಿಗೆ ತರುವುದು. ನವಗ್ರಹ ತೀರ್ಥದಲ್ಲಿರುವ ಈ ಪರ್ವತವು ಆಕಾಶದೆತ್ತರಕ್ಕೆ ಚಾಚಿದೆ. ಇದನ್ನು ನೋಡುವುದೇ ಒಂದು ಹರ್ಷದ ಸಂಗತಿ ಎಂದರು.

ರಾಜಸ್ಥಾನದ ಗುರುದೇವ ಕುಂತುಸಾಗರ ಮಹಾರಾಜರು, ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿ, ಅಚಾರ್ಯರಾದ ದೇವ ನಂದಿ, ಗುಪ್ತನಂದಿ, ಗುಲಾಬ ನಂದಿ, ಪದ್ಮ ನಂದಿ ಮಹಾರಾಜರು, ಬಿಳಿಯುಡುಗೆ ತೊಟ್ಟ ಜೈನ ಸನ್ಯಾನಿಸಿಯರು ಉಪಸ್ಥಿತರಿದ್ದರು.

ಪ್ರತಿಷ್ಠಾಚಾರ್ಯರು ಅಭಿಷೇಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಜೇಂದ್ರ ಜೈನ, ಪ್ರದೀಪ ಮಾಮರ, ಶ್ರೀಮಂತ ಪಂಡಿತ ಮೊದಲಾದವರು ಜನ್ಮಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದರು. ಜನ್ಮ ಕಲ್ಯಾಣದ ನಂತರ ಪ್ರಸಿದ್ಧ ಗಾಯಕ ಅನೂಪ ಜಲೋಟಾ ಮತ್ತು ಸಂಗಡಿಗರಿಂದ ಗೀತಗಾಯನ ಸಂಗೀತ ಕಾರ್ಯಕ್ರಮ ಜರುಗಿತು.

117 ಕಳಸಗಳಿಂದ ಅಭಿಷೇಕ

ಭಗವಾನ್ ಆದಿನಾಥರ ಜನ್ಮಕಲ್ಯಾಣೋತ್ಸವ ನಿಮಿತ್ತ ಆದಿನಾಥರ ಪಂಚ ಲೋಹ ಪ್ರತಿಮೆಗೆ 117 ಕಳಸಗಳಿಂದ ಅಭಿಷೇಕ ನೆರವೇರಿಸಿ ಪುಷ್ಪಾಂಜಲಿ ಸಲ್ಲಿಸಲಾಯಿತು. ವನಸ್ಪತಿಗಳು, ಔಷಧ ದ್ರವ್ಯಗಳು, ಗಿಡಮೂಲಿಕೆಗಳ ಬೇರುಗಳು, ಹತ್ತಾರು ಹಲವು ಚೂರ್ಣಗಳು, ಪಂಚಗವ್ಯ, ಮುತ್ತು, ನವರತ್ನ, ವಜ್ರ, ವೈಢೂರ್ಯಗಳು, ರಜತ, ಚಿನ್ನ ಮೊದಲಾದ ಲೋಹಗಳ ಭಸ್ಮಗಳು, ಧಾನ್ಯಗಳು, ದ್ವಿದಳ ಬೇಳೆಗಳು, ಸುಗಂಧ ಪುಷ್ಪಗಳು, ಕಸ್ತೂರಿ, ಗೋರೋಚನ ಮೊದಲಾದ ಸುಗಂಧಗಳು, ಹಾಲು, ಮೊಸರು ತುಪ್ಪ, ಜೇನು, ಸಕ್ಕರೆ, ಕಬ್ಬಿನ ಹಾಲು, ಎಳನೀರು, ಸಾಗರ ಮತ್ತು ನದಿಗಳ ಪವಿತ್ರ ಜಲ ಮೊದಲಾದವುಗಳನ್ನು ಒಳಗೊಂಡ 117 ಕಳಸಗಳಿಂದ ಆದಿನಾಥರ ಪಂಚ ಲೋಹ ಪ್ರತಿಮೆಗೆ ಅಭಿಷೇಕ ನೆರವೇರಿಸಲಾಯಿತು.