ರೈತ ಕುಟುಂಬದ ಹಿನ್ನೆಲೆಯ ಅದಿತಿ ಹಾವೇರಿ ಜಿಲ್ಲೆಗೆ ಟಾಪರ್

| Published : May 03 2025, 12:15 AM IST

ರೈತ ಕುಟುಂಬದ ಹಿನ್ನೆಲೆಯ ಅದಿತಿ ಹಾವೇರಿ ಜಿಲ್ಲೆಗೆ ಟಾಪರ್
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ವೈದ್ಯಳಾಗಬೇಕೆಂಬ ಗುರಿ ಇದೆ. ಪಠ್ಯೇತರ ಓದು ನನಗೆ ಬಹು ಇಷ್ಟ ಎಂದು ವಿದ್ಯಾರ್ಥಿನಿ ಅದಿತಿ ಹಾವಣಗಿ ತಿಳಿಸಿದರು.

ಹಾನಗಲ್ಲ: ತಾಲೂಕಿನ ಬಿಂಗಾಪುರದ ರೈತ ಕುಟುಂಬದ ವಿದ್ಯಾರ್ಥಿನಿ ಅದಿತಿ ಚನ್ನಬಸಪ್ಪ ಹಾವಣಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ (623 ಅಂಕ) ಪಡೆದಿದ್ದಾಳೆ.

ಹಾನಗಲ್ಲಿನ ರೋಶನಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಗುರುಗಳ ಬಗೆಗೆ ಅತ್ಯಂತ ಶ್ರದ್ಧೆ. ತಂದೆ- ತಾಯಿ ಬೆಂಬಲ ಅದು ಅವರ್ಣನೀಯ ಎನ್ನುತ್ತಾಳೆ. ವರ್ಗ ಕೋಣೆ ಎಂದರೆ ಅದು ದೇವ ಮಂದಿರ. ಎಷ್ಟು ಶ್ರದ್ಧೆಯಿಂದ ಅಲ್ಲಿ ವಿದ್ಯಾರ್ಜನೆ ಮಾಡುತ್ತೇವೆಯೋ ಅದಕ್ಕೂ ಹೆಚ್ಚು ಪ್ರತಿಫಲ ಇಲ್ಲಿ ಸಾಧ್ಯ. ಅದು ನನಗೆ ನನ್ನ ಶಾಲೆಯಿಂದ ಸಾಧ್ಯವಾಗಿದೆ ಎನ್ನುತ್ತಾಳೆ.

ತಂದೆ ಚನ್ನಬಸಪ್ಪ ಹಾವಣಗಿ ಶಿರಸಿ ತಾಲೂಕು ಪಂಚಾಯಿತಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. ತಾಯಿ ಉಮಾ ಹಾವಣಗಿ ಗೃಹಿಣಿ.

ಮಾದರಿ: ಈ ವಿದ್ಯಾರ್ಥಿನಿ ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆಯುತ್ತಾಳೆ ಎಂಬ ನಿರೀಕ್ಷೆ ಇತ್ತು. ಅವಳ ಓದು ಎಲ್ಲ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ. ಅವಳ ಶಿಸ್ತು ಗುರುಗಳಿಗೆ ಗೌರವ ಕೊಡುವಂತಹ ಸಂಗತಿಗಳು ನಿಜಕ್ಕೂ ಮಾದರಿ. ಅದಿತಿ ನಮ್ಮ ಶಾಲೆಯ ವಿದ್ಯಾರ್ಥಿನಿ ಎಂಬ ಹೆಮ್ಮೆ ಇದೆ ಎಂದು ರೋಶನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಬೆನಿತ್ ತಿಳಿಸಿದರು.

ವೈದ್ಯಳಾಗಬೇಕೆಂಬ ಗುರಿ: ನನಗೆ ರಾಜ್ಯ ಮಟ್ಟದಲ್ಲಿ ಸ್ಥಾನ ಲಭಿಸುತ್ತದೆ ಎಂಬ ವಿಶ್ವಾಸವಿತ್ತು. ಎರಡು ಅಂಕ ಎಲ್ಲಿ ಕಳೆದುಕೊಂಡೆ ಎಂದು ಹುಡುಕುತ್ತಿದ್ದೇನೆ. ನನಗೆ ವೈದ್ಯಳಾಗಬೇಕೆಂಬ ಗುರಿ ಇದೆ. ಪಠ್ಯೇತರ ಓದು ನನಗೆ ಬಹು ಇಷ್ಟ ಎಂದು ವಿದ್ಯಾರ್ಥಿನಿ ಅದಿತಿ ಹಾವಣಗಿ ತಿಳಿಸಿದರು.ರಾಣಿಬೆನ್ನೂರು ತಾಲೂಕಿಗೆ 4ನೇ ಸ್ಥಾನ

ರಾಣಿಬೆನ್ನೂರು: ಕಳೆದ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ. 70.10 ಫಲಿತಾಂಶ ಲಭಿಸಿದ್ದು, ಈ ಬಾರಿ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ ಲಭಿಸಿದೆ. ಕಳೆದ ಬಾರಿ ಮೂರನೇ ಸ್ಥಾನ ಪಡೆದಿದ್ದ ತಾಲೂಕು ಈ ಬಾರಿ ಫಲಿತಾಂಶದಲ್ಲಿ ನಾಲ್ಕನೇ ತೃಪ್ತಿಕೊಂಡಿದೆ.ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಕುಳಿತ ಒಟ್ಟು 4394 ವಿದ್ಯಾರ್ಥಿಗಳಲ್ಲಿ 1314 ಬಾಲಕರು ಮತ್ತು 1766 ಬಾಲಕಿಯರು ಸೇರಿ ಒಟ್ಟು 30800 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕನ್ನಡ ಮಾಧ್ಯಮ: ತಾಲೂಕಿನ ಕುಪ್ಪೇಲೂರ ಗ್ರಾಮದ ವಿದ್ಯಾರಣ್ಯ ಪ್ರೌಢಶಾಲೆಯ ಅಮೂಲ್ಯ ಜಿಂಗಾಳಿ 620(ಶೇ.99.20) ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಹಾಗೂ, ನಗರದ ಲಯನ್ಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬನಶ್ರೀ ಲಕ್ಷ್ಮೇಶ್ವರ 618(ಶೇ. 98.88) ದ್ವಿತೀಯ ಹಾಗೂ ಸಿರಿ ಅಜ್ಜೋಡಿಮಠ 616(ಶೇ. 98.56) ತೃತೀಯ ಸ್ಥಾನ ಗಳಿಸಿದ್ದಾರೆ.ಆಂಗ್ಲ ಮಾಧ್ಯಮ: ತಾಲೂಕಿನ ಮಾಕನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಪೃಥ್ವೀಶ ಗೊರಲಹಳ್ಳಿ 622(ಶೇ. 99.52) ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ, ನಿರ್ಮಲಾ ಕೊನಾಪುರ 618(ಶೇ. 98.88) ಮತ್ತು ನಗರದ ಆಲ್ ಇಲಾಹಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೌದಾ ಶಿರಬಡಗಿ 618(ಶೇ. 98.88) ದ್ವಿತೀಯ ಸ್ಥಾನ ಗಳಿಸಿದ್ದಾರೆ.ಉರ್ದು ಮಾಧ್ಯಮ: ನಗರದ ಅಂಜುಮನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ತಾಸೀನಾಭಾನು ಗುತ್ತಲ 581(ಶೇ. 92.96) ತಾಲೂಕಿಗೆ ಪ್ರಥಮ, ನಾಜನೀನಾಬಾನು ಹಳ್ಳಳ್ಳಿ 564(ಶೇ. 90.24) ದ್ವಿತೀಯ ಹಾಗೂ ಗೌಸಿಯಾ ಮುಜಾವತ್ 559(ಶೇ. 89.44) ತೃತೀಯ ಸ್ಥಾನ ಗಳಿಸಿದ್ದಾರೆ.