ಸಾರಾಂಶ
ಮಂಗಳವಾರ ಮಧ್ಯಾಹ್ನದ ವೇಳೆ ದೆಹಲಿ ಪ್ರವಾಸ ಮುಂದೂಡಿಕೆಯಾಗಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ರಾತ್ರಿ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿದ್ದ ಆದಿವಾಸಿ ಮಹಿಳೆಯರಿಗೆ ಕೊಂಚ ನಿರಾಸೆಯಾಗಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ದೆಹಲಿ ವಿಮಾನ ಏರಲು ಸಜ್ಜಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕುಆದಿವಾಸಿ ಮಹಿಳೆಯರಿಗೆ ಇದೀಗ ಕೊಂಚ ನಿರಾಸೆ ಎದುರಾಗಿದೆ. ಮಾ.1 ನೇ ತಾರೀಕಿಗೆ ನಿಗದಿಯಾಗಿದ್ದ ರಾಷ್ಟ್ರಪತಿಗಳ ಭೇಟಿ ಮಾ.8ಕ್ಕೆ ಮುಂದೂಡಲ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಇವರ ಪ್ರಯಾಣ ರದ್ದಾಗಿದೆ.ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯಡಿ, ಸಂಜೀವಿನೀ -ಕರ್ನಾಟಕ
ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡದ ನಾಲ್ವರು ಆದಿವಾಸಿ ಮಹಿಳೆಯರ ಸಹಿತ ರಾಜ್ಯದ 35 ಮಂದಿಯ ದೆಹಲಿ ಪ್ರವಾಸಕ್ಕೆ ಸಿದ್ಧತೆ ನಡೆದಿತ್ತು.ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದ ಸುಳ್ಯ ತಾಲೂಕಿನ ಕೊಲ್ಲಮೊಗರುವಿನ ಮೀನಾಕ್ಷಿ ಮತ್ತು ವನಿತಾ, ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನ ಲಕ್ಷ್ಮೀ, ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಸುಂದರಿ ಅವರು ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ತೆರಳಬೇಕಾಗಿತ್ತು.
ಫೆ.27 ರ ಮಂಗಳವಾರ ರಾತ್ರಿ ಬಸ್ ನಲ್ಲಿ ಬೆಂಗಳೂರಿಗೆ ಪಯಣಿಸಲು ಬಸ್ ಟಿಕೆಟ್ ಹಾಗೂ . ಫೆ.29 ರಂದು ಮುಂಜಾನೆ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಟಿಕೆಟ್ ಕೂಡ ಸಿದ್ಧವಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನದ ವೇಳೆ ದೆಹಲಿ ಪ್ರವಾಸ ಮುಂದೂಡಿಕೆಯಾಗಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ರಾತ್ರಿ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿದ್ದ ಆದಿವಾಸಿ ಮಹಿಳೆಯರಿಗೆ ಕೊಂಚ ನಿರಾಸೆಯಾಗಿದೆ.ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಬದಲಾವಣೆಗಳಾದ ಹಿನ್ನೆಲೆಯಲ್ಲಿ ಆದಿವಾಸಿ ಮಹಿಳೆಯರ ಪ್ರವಾಸದ ದಿನಾಂಕ ಬದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.