ಕುಟುಂಬವು ಧರ್ಮ ಹಾಗೂ ಸಂಸ್ಕಾರದ ಮೂಲ ಕೇಂದ್ರವಾಗಿದೆ. ಗಂಡ- ಹೆಂಡತಿಯ ನಡುವಿನ ಸಂಬಂಧ ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿರದೆ, ಕುಟುಂಬದ ಮುಂದಿನ ಪೀಳಿಗೆಯ ವ್ಯಕ್ತಿತ್ವ ನಿರ್ಮಾಣಕ್ಕೂ ಕಾರಣವಾಗುತ್ತದೆ. ಹೀಗಾಗಿ ದಾಂಪತ್ಯದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು.

ಶಿರಸಿ: ಇಂದಿನ ಸಮಾಜದಲ್ಲಿ ವಿವಾಹ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಕುಟುಂಬ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ದಂಪತಿಗಳು ತಮ್ಮ ಪಟ್ಟು, ಹಠ ಹಾಗೂ ಅಹಂಗಳನ್ನು ಸಡಿಲಿಸಿಕೊಂಡು ಪರಸ್ಪರ ಹೊಂದಾಣಿಕೆ, ವಿಶ್ವಾಸ ಮತ್ತು ಗೌರವದಿಂದ ಬದುಕಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ಸ್ವರ್ಣವಲ್ಲೀಯಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಮ್ಮಿಕೊಂಡ ‘ಧನ್ಯೋ ಗೃಹಸ್ಥಾಶ್ರಮ’ ದಂಪತಿ ಶಿಬಿರದಲ್ಲಿ ಆಶೀರ್ವಚನ ನುಡಿದ ಶ್ರೀಗಳು, ಕುಟುಂಬವು ಧರ್ಮ ಹಾಗೂ ಸಂಸ್ಕಾರದ ಮೂಲ ಕೇಂದ್ರವಾಗಿದೆ. ಗಂಡ- ಹೆಂಡತಿಯ ನಡುವಿನ ಸಂಬಂಧ ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿರದೆ, ಕುಟುಂಬದ ಮುಂದಿನ ಪೀಳಿಗೆಯ ವ್ಯಕ್ತಿತ್ವ ನಿರ್ಮಾಣಕ್ಕೂ ಕಾರಣವಾಗುತ್ತದೆ. ಹೀಗಾಗಿ ದಾಂಪತ್ಯದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.ಅಗ್ನಿ ಹಾಗೂ ದೇವತೆಗಳ ಸಾಕ್ಷಿಯಾಗಿ ನಡೆದ ವಿವಾಹ ಸಂಬಂಧವನ್ನು ಜೀವನಪರ್ಯಂತ ಗೌರವದಿಂದ ಕಾಪಾಡಿಕೊಳ್ಳುವ ಸಂಕಲ್ಪ ದಂಪತಿಗಳಲ್ಲಿರಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರೂ ಅವುಗಳನ್ನು ಹಠ ಅಥವಾ ಅಹಂಕಾರದಿಂದ ದೊಡ್ಡದಾಗಿಸಿಕೊಳ್ಳದೆ, ಮಾತುಕತೆ ಹಾಗೂ ಪರಸ್ಪರ ವಿಶ್ವಾಸದ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿಬಿರದಲ್ಲಿ ಗೃಹಸ್ಥಾಶ್ರಮದ ಧರ್ಮ, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಕುಟುಂಬ ಮೌಲ್ಯಗಳ ಸಂರಕ್ಷಣೆ ಹಾಗೂ ಮಕ್ಕಳಿಗೆ ನೈತಿಕ ಮತ್ತು ಸಾಂಸ್ಕೃತಿಕ ಸಂಸ್ಕಾರ ನೀಡುವ ಮಹತ್ವದ ಕುರಿತು ಮಾರ್ಗದರ್ಶನ ವಿ. ಅನಂತಮೂರ್ತಿ ಭಟ್ಟ, ವೇ. ಸೀತಾರಾಮ ಭಟ್ಟ ಮತ್ತಿಗಾರ, ಡಾ. ವಸಂತ ಭಟ್ಟ, ಡಾ‌. ಭಾವನಾ ಭಟ್ಟ, ವಿನಾಯಕ ಹೆಬ್ಬಾರ ನೀಡಿದರು.ಕಾರ್ಯಕ್ರಮದಲ್ಲಿ ವಿ.ಎಂ. ಹೆಗಡೆ ತ್ಯಾಗಲಿ, ಗೀತಾ ಎಚ್. ಹೆಗಡೆ ಶಿಗೇಮನೆ ಹಾಗೂ ಶ್ರೀನಿವಾಸ ಮತ್ತಿಘಟ್ಟ ಉಪಸ್ಥಿತರಿದ್ದರು. 27 ನವದಂಪತಿಗಳು ಶಿಬಿರದ ಪ್ರಯೋಜನ ಪಡೆದರು.