ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ನೇಮಿಸಿ

| Published : May 02 2025, 12:10 AM IST

ಸಾರಾಂಶ

ಶಿವಮೊಗ್ಗ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಗಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯ ಹೊನ್ನಾಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಶಿವಮೊಗ್ಗ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಗಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯ ಹೊನ್ನಾಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಸರ್ವ ಸದಸ್ಯರ ವಿಶೇಷ ಸಭೆ ಜೂನ್‌ 22ರಂದು ನಡೆಯಲಿದೆ. ಈ ಸಭೆಯಲ್ಲಿ ಬೈಲಾ ತಿದ್ದುಪಡಿಯ ಬಗ್ಗೆ ಚರ್ಚೆಯಾಗಲಿದೆ. ಅದನ್ನು ಈಗಿರುವ ಯಥಾ ಸ್ಥಿತಿಯಲ್ಲಿ ಮಂಡಿಸದೇ ಎಲ್ಲರೂ ಒಪ್ಪುವ ಸ್ಥಿತಿಯಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಬೈಲಾ ತಿದ್ದುಪಡಿಯಬಗ್ಗೆ ಅವೈಜ್ಞಾನಿಕವಾಗಿ ಮಾತನಾಡುತ್ತಿದ್ದಾರೆ. ನಮ್ಮ ಸಂವಿಧಾನದಲ್ಲಿ ಆನಂದ ಸಿದ್ಧಾಂತ ಅನ್ವಯವಾಗುವುದು. ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮಾತ್ರ, ಆದರೆ ಈ ಸಿದ್ಧಾಂತ ತಮಗೂ ಅನ್ವಯವಾಗುತ್ತೆ ಎಂದು ಕೊಂಡಿದ್ದಾರೆ. ಈ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡಬಾರದು ಎಂದು ಹೇಳಿದರು.

ಹೊಸ ಬೈಲಾ ಜಾರಿಗೆ ಬಂದರೆ ಅಧಿಕಾರವೆಲ್ಲ ಕೇಂದ್ರಿಕೃತವಾಗುತ್ತದೆ. ಅಧ್ಯಕ್ಷರದೆ ಕಾರುಬಾರು ಆಗುತ್ತದೆ. ಸರ್ವಾಧಿಕಾರಕ್ಕೆ ಒತ್ತುಕೊಟ್ಟಾಗುತ್ತದೆ. ಜಿಲ್ಲಾ ಕೇಂದ್ರಗಳಿಗೆ, ಹೋಬಳಿ ಕೇಂದ್ರಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ, ಸ್ಥಳೀಯ ನೇಮಕಾತಿಗಳನ್ನು ಅಧ್ಯಕ್ಷರೇ ಮಾಡಬೇಕಾಗುತ್ತದೆ. ಘಟಕಗಳು ಸ್ವಾತಂತ್ರ್ಯ ಕಳೆದುಕೊಳ್ಳುತ್ತವೆ. ಇದು ಅಪಾಯದ ಸಂಕೇತವಾಗಿದೆ ಎಂದರು.

ಅನೇಕ ವಿಷಯಗಳು ಬೈಲಾದಲ್ಲಿ ತಿದ್ದುಪಡಿಯಾಗಲಿದೆ. ಸಭೆಗೆ ಗೈರು ಹಾಜರಾದರೆ ಅದನ್ನು ಕಿತ್ತು ಹಾಕುವ ಬದಲು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ಘಟಕಕ್ಕೆ ನೀಡಬೇಕು. ಇಲ್ಲಿ ರಾಜ್ಯಾಧ್ಯಕ್ಷರ ಪ್ರವೇಶ ಇರಬಾರದು. ಗೌರವ ಪದವಿಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬಾರದು ಎಂದಿದ್ದರು ಕೂಡ ರಾಜ್ಯಾಧ್ಯಕ್ಷರು ನಾಡೋಜ ಎಂಬ ಪದವನ್ನು ಬಳಸುತ್ತಿದ್ದಾರೆ. ಕೂಡಲೇ ಅದನ್ನು ನಿಲ್ಲಿಸಬೇಕು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅನೇಕ ಭ್ರಷ್ಟಚಾರ ನಡೆದಿದೆ ಎಂದು ತಿಳಿದುಬಂದಿದೆ. ಅವುಗಳನ್ನು ತನಿಖೆ ಮಾಡಬೇಕು. ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಕೇಂದ್ರ ಪರಿಷತ್ ಆದ್ಯತೆ ನೀಡಬೇಕು ಎಂದು ಹೇಳಿದರು.

ಬಿ.ಚಂದ್ರೇಗೌಡ ಮಾತನಾಡಿ, ಮಹೇಶ್ ಜೋಷಿ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದ ಮೇಲೆ ಸಮಸ್ಯೆಗಳು ಹೆಚ್ಚಿವೆ. ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚವನ್ನೇ ಇವರೆಗೂ ಕೊಟ್ಟಿಲ್ಲ. ಅಲ್ಲಿ ಬಿಡುಗಡೆಯಾಗಿದ್ದು ೩೩ ಕೋಟಿ ರು., ವಿವಿಧೆಡೆಯಿಂದ ಬಂದ ಹಣ ೨.೫ ಕೋಟಿ ರು. ಆ ಲೆಕ್ಕದ ಬಗ್ಗೆ ಮಾತೇ ಇಲ್ಲ. ಸರ್ವಾಧಿಕಾರಿಯಂತೆ ಅವರು ವರ್ತಿಸುತ್ತಿದ್ದಾರೆ. ತಮ್ಮನ್ನು ವಿರೋಧಿಸಿದ ಜಿಲ್ಲಾ ಅಧ್ಯಕ್ಷರುಗಳಿಗೆ ನೋಟಿಸ್ ಕೊಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಸಂಗಮೇಶ್, ಪ್ರಕಾಶ್, ಕೃಷ್ಣಮೂರ್ತಿ, ಮಂಜಪ್ಪ, ಗಣೇಶ್, ಪುಟ್ಟಯ್ಯ, ಶೇಖರ್ ಗೌಳೇರ್ ಇದ್ದರು.