ಸಾರಾಂಶ
ಕೊಪ್ಪಳ: ಹದಿ-ಹರೆಯದವರು ಈ ದೇಶದ ಸಂಪತ್ತು. ಅವರ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ವೆಂಕಟಗಿರಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹೇಮಗುಡ್ಡ ಸಂಯುಕ್ತಾಶ್ರಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅನಿಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಬಗ್ಗೆ ಆಯೋಜಿಸಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಜನಸಂಖ್ಯೆಯಲ್ಲಿ ಶೇ.22 ಹದಿ-ಹರೆಯದ ವಯಸ್ಸಿನವರು (10-19 ವರ್ಷ) ಇರುತ್ತಾರೆ. ಇವರ ಆರೋಗ್ಯ ಕಾಪಾಡುವುದು ಇಲಾಖೆಗಳ ಹಾಗೂ ಪಾಲಕರ ಕರ್ತವ್ಯವಾಗಿದೆ. ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ರಕ್ತಹೀನತೆ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬರುತ್ತದೆ. ಇದಕ್ಕೆ ವೈಯಕ್ತಿಕ ಸ್ವಚ್ಛತೆ ಪಾಲಿಸದೇ ಇರುವುದು, ಪೌಷ್ಟಿಕ ಆಹಾರ ಸೇವನೆ ಮಾಡದಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಹದಿ-ಹರೆಯದವರು ಈ ದೇಶದ ಸಂಪತ್ತು. ಅವರ ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ವಯಸ್ಸಿನಲ್ಲಿ ಅವರ ದೈಹಿಕ/ಮಾನಸಿಕವಾಗಿ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯವಶ್ಯಕ ಎಂದು ಅವರು ಹೇಳಿದರು.ಹದಿ-ಹರೆಯದ ಪ್ರತಿಯೊಬ್ಬರು ಪೌಷ್ಟಿಕ ಆಹಾರ ಸೇವಿಸಿ, ರಕ್ತಹೀನತೆ ದೂರವಿಡಿ. ರಕ್ತಹೀನತೆಯಿಂದ ಆಯಾಸ, ಸುಸ್ತು, ನಿಶ್ಯಕ್ತಿ, ಪೇಲವತೆ, ಹೊಟ್ಟೆನೋವು, ನಾಲಿಗೆ ಬಿಳಿಚಿಕೊಳ್ಳುವುದು ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ರಕ್ತದ ಪರೀಕ್ಷೆ ಮಾಡಿಸಬೇಕು ಎಂದರು.ರಕ್ತಹೀನತೆ ಉಂಟಾದರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ರಕ್ತಹೀನತೆ ತಡೆಗಟ್ಟಲು ದಿನ ನಿತ್ಯದ ಆಹಾರದಲ್ಲಿ ಸಾಧ್ಯವಾದಷ್ಟು ಹಸಿರು ತರಕಾರಿ, ಮೊಳಕೆ ಬರಿಸಿದ ಕಾಳು, ಹಾಲು, ಶೇಂಗಾಚಿಕ್ಕಿ, ಏಕದಳ ಧಾನ್ಯಗಳಿಂದ ತಯಾರಿಸಿದ ಆಹಾರ ಹೆಚ್ಚಾಗಿ ಸೇವಿಸಬೇಕು. ಇಲಾಖೆಯಲ್ಲಿ ಪ್ರತಿ ಸೋಮವಾರ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿ ನೀಡುವ ಕಬ್ಬಿಣಾಂಶ ಮಾತ್ರೆ ಹಾಗೂ ಪ್ರತಿ 6 ತಿಂಗಳಿಗೊಮ್ಮೆ ನೀಡುವ ಜಂತು ನಿವಾರಕ ಮಾತ್ರೆ ಸೇವಿಸಿ ರಕ್ತಹೀನತೆ ತಡೆಗಟ್ಟಬೇಕು. ನಂತರ ಕಡ್ಡಾಯವಾಗಿ ಎಲ್ಲರೂ ಶೌಚಾಲಯ ಬಳಸಬೇಕು. ಕೈ ತೊಳೆಯುವ ವಿಧಾನಗಳ ಬಗ್ಗೆ ತಿಳಿದುಕೊಂಡು ಪ್ರತಿಯೊಬ್ಬರೂ ಇತರರಿಗೂ ಅರಿವು ಮೂಡಿಸಿ ರಕ್ತಹೀನತೆ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕೆಂದು ತಿಳಿಸಿದರು.ವೆಂಕಟಗಿರಿ ಸಮುದಾಯ ಆರೋಗ್ಯಾಧಿಕಾರಿ ಶ್ರೀದೇವಿ ಮಾತನಾಡಿ, ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು, ಸೋಂಕಿತ ಸೊಳ್ಳೆಯಿಂದ ಹರಡುವ ಡೆಂಗ್ಯೂ ಚಿಕೂನ್‌ಗುನ್ಯ, ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ, ಜಿಕಾವೈರಸ್ ನಿಯಂತ್ರಣ ಹಾಗೂ ಅಸಾಂಕ್ರಾಮಿಕ ರೋಗಗಳ ಕುರಿತು ವಿವರವಾಗಿ ಮಾತನಾಡಿದರು.ನಂತರ ವಿದ್ಯಾರ್ಥಿಗಳಿಗೆ ಕರಪತ್ರ ವಿತರಣೆ ಮಾಡಿ, ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರವಿಕುಮಾರ, ಸಹ ಶಿಕ್ಷಕರಾದ ವಿನೋದ, ಸೈಯದ್ ಅಬುಬಕರ್, ದುರ್ಗಾಪ್ರಸಾದ, ಗ್ಯಾನಪ್ಪ, ಹನುಮಂತ, ಶರಣಪ್ಪ, ಶಿಲ್ಪಾ, ತುಳುಶಾ, ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟೇಶ, ಆಶಾ ಕಾರ್ಯಕರ್ತೆ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.