ಹದಿಹರೆಯದ ಸಮಸ್ಯೆಗಳಿಗೆ ವೈದ್ಯರ ಸಲಹೆ ಅಗತ್ಯ: ರಾಜಾರಾಂ ಭಟ್

| Published : Dec 14 2024, 12:46 AM IST

ಹದಿಹರೆಯದ ಸಮಸ್ಯೆಗಳಿಗೆ ವೈದ್ಯರ ಸಲಹೆ ಅಗತ್ಯ: ರಾಜಾರಾಂ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯ ಡಾ. ಅರುಣ್ ಪ್ರಸಾದ್ ಮಾತನಾಡಿ, ಮೊಬೈಲ್ ಯುಗ ಆರಂಭವಾದ ನಂತರದ ದಿನಗಳಲ್ಲಿ ಕಣ್ಣಿನ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಜಾಗೃತವಹಿಸಬೇಕಿದೆ. ದೃಷ್ಟಿ ಸಮಸ್ಯೆಯಿಂದ ಕೆಲ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅತಿಮುಖ್ಯ ಎಂದರು.

ಕನ್ನಡಪ್ರಭ ವಾರ್ತೆ ಉಳ್ಳಾಲ ಹದಿಹರೆಯ ಅತ್ಯಂತ ಪ್ರಾಮುಖ್ಯವಾದ ಘಟ್ಟ, ವ್ಯಕ್ತಿತ್ವ ವಿಕಸನದ ಕಾಲಘಟ್ಟ. ಈ ವೇಳೆ ಉಂಟಾಗುವ ಸಮಸ್ಯೆಗಳು ಜೀವನದುದ್ದಕ್ಕೂ ತೊಂದರೆಗಳನ್ನು ತಂದೊಡ್ಡಬಹುದು. ವೈದ್ಯರ ಸಲಹೆ ಪಡೆದಾಗ ಸದೃಢ ಆರೋಗ್ಯ ಪಡೆಯಬಹುದು ಎಂದು ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಸಂಚಾಲಕ ಟಿ.ಜಿ. ರಾಜಾರಾಂ ಭಟ್ ಅಭಿಪ್ರಾಯಪಟ್ಟರು.

ಲೈಫ್ ನೆಸ್ಟ್ ಟ್ರಸ್ಟ್‌ ಮಂಗಳೂರು, ದೇರಳಕಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಹಾಗೂ ಶಾರದಾಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಅಶ್ವಿನಿ ಹೆಲ್ತ್ ಕೇರ್ ವೈದ್ಯ ಡಾ. ಅರುಣ್ ಪ್ರಸಾದ್ ಮಾತನಾಡಿ, ಮೊಬೈಲ್ ಯುಗ ಆರಂಭವಾದ ನಂತರದ ದಿನಗಳಲ್ಲಿ ಕಣ್ಣಿನ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಜಾಗೃತವಹಿಸಬೇಕಿದೆ. ದೃಷ್ಟಿ ಸಮಸ್ಯೆಯಿಂದ ಕೆಲ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅತಿಮುಖ್ಯ ಎಂದರು. ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಕಂಬ್ಳಪದವು ಜಯರಾಮ ಶೆಟ್ಟಿ ಮಾತನಾಡಿದರು.

ಈ ಸಂದರ್ಭ ಪ್ರಾಂಶುಪಾಲರಾದ ಅರುಣ್‌ಪ್ರಕಾಶ್ ಶೆಟ್ಟಿ, ಕೆ.ಎಸ್. ಹೆಗ್ಡೆ ಕಣ್ಣು, ಮೂಗು, ಕಿವಿ ವಿಭಾಗದ ಡಾ. ನೀಮಾ ಕೆ., ಸ್ತ್ರೀರೋಗ ತಜ್ಞ ಡಾ. ಸಂಜೀವಿನಿ, ಆಗ್ನೆಟಾ ಐಮನ್, ಮಾರುಕಟ್ಟೆ ವಿಭಾಗದ ತಿಲಕ್, ಲೈಫ್ ನೆಸ್ಟ್ ಟ್ರಸ್ಟ್ ಅಧ್ಯಕ್ಷ ಅಚಲ್ ಶರ್ಮಾ ಆರ್.ಎಂ., ಟ್ರಸ್ಟಿಗಳಾದ ಕೆ. ಯಶವಂತ್ ರಾವ್, ವಿನಯ್ ಶರ್ಮ ಉಪಸ್ಥಿತರಿದ್ದರು.ಶ್ರೀನಿವಾಸ್ ಭಟ್ ಸೇರಾಜೆ ನಿರೂಪಿಸಿದರು. ಪ್ರಾಧ್ಯಾಪಕ ಚಂದ್ರಕುಮಾರ್ ಸ್ವಾಗತಿಸಿದರು. ಶಿಕ್ಷಕಿ ದೀಪಿಕಾ ವಂದಿಸಿದರು.