ಸಣ್ಣ ಅಭ್ಯಾಸವಾಗಿ ಕಾಣಿಸಿಕೊಳ್ಳುವ ಇಂತಹ ದುಶ್ಚಟಗಳು ಕ್ರಮೇಣ ವ್ಯಸನವಾಗಿ ಬದಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು.
ಹುಬ್ಬಳ್ಳಿ: ನಶೆಯ ಚಟದಿಂದ ಯುವಜನರು ತಮ್ಮ ಅಮೂಲ್ಯವಾದ ಜೀವನ, ಆರೋಗ್ಯ, ಶಿಕ್ಷಣ, ಗುರಿ ಮತ್ತು ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯಕ್ಕೂ ಇದು ಕಂಟಕ. ಆದಕಾರಣ ದುಶ್ಚಟಗಳಿಂದ ದೂರವಿದ್ದು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ವೀಣಾ ಎನ್. ಹೇಳಿದರು.ನಗರದ ಕೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಶುಕ್ರವಾರ ಡಾ.ಬಿ.ಎಫ್. ದಂಡಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನಶಾ ಮುಕ್ತ ಯುವ್ ಫಾರ್ ವಿಕಸಿತ ಭಾರತ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನರು ನಶೆಯ ಚಟಕ್ಕೆ ಹೇಗೆ ಆಕರ್ಷಿತರಾಗುತ್ತಾರೆ, ಅದರ ಪರಿಣಾಮವಾಗಿ ಅವರ ಜೀವನದಲ್ಲಿ ಎದುರಾಗುವ ಸಮಸ್ಯೆಗಳೇನು ಎಂಬುದನ್ನು ವಿವರಿಸಿದ ಅವರು, ಸ್ನೇಹಿತರ ಒತ್ತಡ, ಕುತೂಹಲ, ಅನುಕರಣೆಯ ಮನೋಭಾವ ಹಾಗೂ ಕ್ಷಣಿಕ ಸಂತೋಷದ ಆಸೆಯಿಂದ ಕೆಲವರು ತಂಬಾಕು ಮತ್ತು ಇತರ ಮಾದಕ ವಸ್ತುಗಳ ಬಳಕೆಗೆ ಮುಂದಾಗುತ್ತಾರೆ. ಸಣ್ಣ ಅಭ್ಯಾಸವಾಗಿ ಕಾಣಿಸಿಕೊಳ್ಳುವ ಇಂತಹ ದುಶ್ಚಟಗಳು ಕ್ರಮೇಣ ವ್ಯಸನವಾಗಿ ಬದಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಎಸ್. ಸಂಸ್ಥೆಯ ಅಧ್ಯಕ್ಷ ರವೀಂದ್ರನಾಥ ದಂಡಿನ ಮಾತನಾಡಿ, ಯುವಜನರು ದೇಶದ ಅಮೂಲ್ಯ ಸಂಪತ್ತು. ಅವರ ಶಕ್ತಿ, ಪ್ರತಿಭೆ ಮತ್ತು ಪರಿಶ್ರಮವು ರಾಷ್ಟ್ರದ ಭವಿಷ್ಯ ನಿರ್ಧರಿಸುತ್ತದೆ ಎಂದರು.ಯುವಜನರು ದುಶ್ಚಟಗಳಿಗೆ ಬಲಿಯಾಗದೆ, ತಮ್ಮಲ್ಲಿರುವ ಸಾಮರ್ಥ್ಯವನ್ನು ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯೋಗ ಮತ್ತು ಸಮಾಜಸೇವೆಯಂತಹ ಸಕಾರಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ವಿಕಸಿತ ಭಾರತ’ದ ಕನಸನ್ನು ನನಸಾಗಿಸುವಲ್ಲಿ ಯುವಜನರ ಜವಾಬ್ದಾರಿ ಬಹಳ ದೊಡ್ಡದಾಗಿದೆ. ಯುವಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದರು.
ಮಹಾವಿದ್ಯಾಲಯದ ಪದವಿ ವಿಭಾಗದ ಪ್ರಾಚಾರ್ಯ ಡಾ.ಬಿ.ಜಿ. ಮಡ್ಲಿ, ಪದವಿಪೂರ್ವ ವಿಭಾಗದ ಪ್ರಾಚಾರ್ಯ ಸಂದೀಪ್ ಬೂದಿಹಾಳ, ಉದ್ಯಮಿ ಗೌತಮ್ ಬಾಪನ ಹಾಗೂ ಬಿ.ಎಸ್.ಡಬ್ಲ್ಯೂ. ಪದವಿ ವಿಭಾಗದ ಪ್ರಾಚಾರ್ಯ ಮಹೇಶ್ ಗೌಡಪ್ಪಗೌಡರ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬೀರೇಶ್ ತಿರಕಪ್ಪನವರ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಜೇಶ್ವರಿ ಮಡಿವಾಳರ ಪ್ರಾರ್ಥಿಸಿದರು. ಉಪನ್ಯಾಸಕಿ ಗಾಯತ್ರಿ ರಾಮನಗೌಡ್ರ ನಿರೂಪಿಸಿದರು.