ಅಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಲು ಯೋಗಾಭ್ಯಾಸ, ಸಮತೋಲನ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು.

ರಾಷ್ಟ್ರೀಯ ಆಯುಷ್ ಅಭಿಯಾನದಡಿ ವಿಶೇಷ ಆರೋಗ್ಯ ಶಿಬಿರ

ಕನ್ನಡಪ್ರಭ ವಾರ್ತೆ ಮುಂಡಗೋಡ

ಅಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಲು ಯೋಗಾಭ್ಯಾಸ, ಸಮತೋಲನ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಪ್ರಭಾರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ ಯಾಜಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಉತ್ತರ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮುಂಡಗೋಡ ಇವುಗಳ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಪಟ್ಟಣದ ಲೊಯೋಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ವಿಶೇಷ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕರ ಜೀವನಶೈಲಿ, ಪಥ್ಯಾಹಾರ, ಯೋಗ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳಿಗೆ ಆದ್ಯತೆ ನೀಡಬೇಕು. ರುಚಿಗಾಗಿ ಎಲ್ಲೆಂದರಲ್ಲಿ ಆಹಾರ ಸೇವಿಸುವ ಬದಲು ದೇಹಕ್ಕೆ ಅಗತ್ಯವಾದ ಸಮತೋಲನ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅಸಾಂಕ್ರಾಮಿಕ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ಆಯುರ್ವೇದವು ರೋಗದ ಲಕ್ಷಣಗಳನ್ನು ಮಾತ್ರವಲ್ಲದೆ ರೋಗದ ಮೂಲ ಕಾರಣಗಳನ್ನು ಅರ್ಥಮಾಡಿಕೊಂಡು ಆರೋಗ್ಯ ಕಾಪಾಡುವ ಪರಂಪರೆಯನ್ನು ಹೊಂದಿದೆ. ಸಾರ್ವಜನಿಕರಿಗೆ ಅಗತ್ಯವಿರುವ ವೈದ್ಯಕೀಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದು ಆರೋಗ್ಯ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ ಅವರು, ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳ ಸೇವೆಗಳು ಸಾರ್ವಜನಿಕರಿಗೆ ಅಗತ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎರಡೂ ವೈದ್ಯಕೀಯ ವ್ಯವಸ್ಥೆಗಳ ಸೇವೆಗಳನ್ನು ಬಲಪಡಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.

ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಅನಿಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಆರೋಗ್ಯಕ್ಕಾಗಿ ಅಗತ್ಯವಿರುವ ಸಹಕಾರವನ್ನು ಸಂಸ್ಥೆಯ ವತಿಯಿಂದ ನೀಡಲಾಗುವುದು ಎಂದರು.

ಮಧು ಕ್ಲಿನಿಕ್‌ನ ಯೋಗ ಥೆರಪಿಸ್ಟ್ ಡಾ. ಲಕ್ಷ್ಮಿ ಬಡೀಗೇರ, ಒತ್ತಡದಿಂದ ಮೈಗ್ರೇನ್, ತಲೆನೋವು, ಮೈಕೈ ನೋವು, ಗಂಟು-ಕೀಲು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇಂತಹ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಡಗೋಡದ ಆಡಳಿತ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಡಾ. ಸ್ವರೂಪ ರಾಣಿ, ಡಾ. ಭಾಗ್ಯಲಕ್ಷ್ಮಿ ಕೆ., ಡಾ. ಭಾಗ್ಯಶ್ರೀ, ಡಾ. ಮಲ್ಲಿಕಾರ್ಜುನ ಕಮತರ್, ನವೀನ ಬಡಿಗೇರ, ಡಾ. ವಿಕ್ರಮ ದೇಶಭಂಡಾರಿ ಸೇರಿದಂತೆ ಆಯುರ್ವೇದ ತಜ್ಞ ವೈದ್ಯರು ಉಪಸ್ಥಿತರಿದ್ದರು.

ಮಂಗಳಾ ಮೋರೆ ನಿರೂಪಿಸಿದರು. ಪ್ರವೀಣ ಶೆದಿಯಣ್ಣನವರ ಸ್ವಾಗತಿಸಿದರು. ನಕುಲಾಬಾಯಿ ಕೊಕರೆ ಸಂವಿಧಾನದ ಪೀಠಿಕೆ ವಾಚಿಸಿದರು. ನಾಗರಾಜ ಕಟ್ಟಿಮನಿ ವಂದಿಸಿದರು. ತೇಜಸ್ವಿನಿ ಬೇಗೂರ ಕಾರ್ಯಕ್ರಮ ಸಂಯೋಜಿಸಿದರು.