ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನದಲ್ಲಿ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶ ಕಂಡಂತಹ ಹೊಸ ಶಕ್ತಿ ಹಾಗೂ ಚೇತನವಾಗಿದ್ದು, ಡಿ.6 ರಂದು ತಮ್ಮ ದೇಹವನ್ನು ತ್ಯಾಗ ಮಾಡಿದರು. ಅವರ ಕೊಡುಗೆ, ಸಾಧನೆ, ಆದರ್ಶ, ಚಿಂತನೆ ಹಾಗೂ ಮೌಲ್ಯಗಳು ಇಂದಿಗೂ ಜೀವಂತವಾಗಿವೆ ಎಂದರು.ದೇಶಕ್ಕೆ ಅತಿ ದೊಡ್ಡ ಸಂವಿಧಾನವನ್ನು ಕೊಟ್ಟಂತಹ ಪುಣ್ಯಾತ್ಮರು. ಅವರು ನೀಡಿರುವ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಜೀವಿಸುತ್ತಿದ್ದು, ಅಂತಹ ಚೈತನ್ಯ ನಮ್ಮ ದೇಶಕ್ಕೆ ದಕ್ಕಿದ್ದು ನಮ್ಮೆಲ್ಲರ ಪುಣ್ಯವಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ರವರು ಕಂಡಂತಹ ಕನಸಿನ ಅನುಗುಣವಾಗಿ ಸಂವಿಧಾನದ ಆಶಯಗಳಂತೆ ಪಣತೊಟ್ಟು ನಾವೆಲ್ಲರೂ ಬದುಕಬೇಕು. ಅವರು ಚಿಂತನೆಗಳನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಎಂದು ತಿಳಿಸಿದರು.ಜಿಪಂ ಸಿಇಒ ಶೇಖ್ ತನ್ವಿರ್ ಆಸೀಫ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಬರೆದಿರುವ ಪುಸ್ತಕಗಳು ಪ್ರಸ್ತುತ ದಿನದಲ್ಲಿಯೂ ಜೀವಂತವಾಗಿದೆ. ನಮ್ಮ ದೇಶಕ್ಕೆ ಅವರು ಕೊಟ್ಟಿರುವ ಸಂವಿಧಾನವು ನಮ್ಮ ಬದುಕಿಗೆ ದಾರಿಯಾಗಿದೆ. ಅವರು ಪ್ರತಿಯೊಬ್ಬರಿಗೂ ಸಮಾನತೆ, ಐಕ್ಯತೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನದ ಮೂಲಕ ನೀಡಿ ಜನರಿಗೆ ಶಕ್ತಿ ತುಂಬಿದ್ದಾರೆ ಎಂದರು.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಡಿಸೆಂಬರ್ 6 ರಂದು ನಮ್ಮನ್ನು ಶಾರೀರಾತ್ಮಕವಾಗಿ ಆಗಲಿದರು. ಆದರೆ, ಅವರು ನೀಡಿದ ಸಂವಿಧಾನದ ಆಧಾರದ ಮೇಲೆ ಇಂದಿಗೂ ಕಾನೂನು ವ್ಯವಸ್ಥೆ ನಿಂತಿದೆ. ಇವತ್ತಿನ ಕಾಲಮಾನಕ್ಕೂ ಪ್ರಸ್ತುತವಾದ ಸಂವಿಧಾನವನ್ನು ಭಾರತಕ್ಕೆ ನೀಡಿದ ಮಹಾನ್ ಚೇತನ. ಇನ್ನೂ ಸಾವಿರಾರು ವರ್ಷ ಕಳೆದರೂ ಬಾಬ ಸಾಹೇಬ್ ಹೆಸರು ಅಜರಾಮರವಾಗಿ ಇರುತ್ತದೆ ಎಂದು ಹೇಳಿದರು.ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್ ಸೇರಿದಂತೆ, ವಿವಿಧ ಇಲಾಖೆ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.