ವಿಧ್ಯಾರ್ಥಿಗಳು ಪಾಲಕರಿಗೆ ಹಾಗೂ ಗುರು ಹಿರಿಯರಿಗೆ ಗೌರವ ನೀಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳವಣಿಗೆ ಹೊಂದಲು ಸಾಧ್ಯ

ಯಲಬುರ್ಗಾ: ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಹತ್ವ ನೀಡಿ,‌ಉತ್ತಮ ಅಂಕ ಗಳಿಸುವ ಜತೆಗೆ ಜೀವನದಲ್ಲಿ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಗಿಣಗೇರಿಯ ಸರಸ್ವತಿ ಪೀಠದ ಶ್ರೀಕಂಠಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ದಮ್ಮೂರು ಗ್ರಾಮದ ಶ್ರೀ ಭೀಮಾಂಬಿಕಾ ಮಠದಲ್ಲಿ ೩೮೯ನೇ ಶಿವಾನುಭವ ಗೋಷ್ಠಿಯಲ್ಲಿ ಅರಿವೇ ಗುರು ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲಷ್ಟೇ ಸೀತಮಿತರಾಗದೆ ಸಂಸ್ಕಾರ, ಸಂಸ್ಕೃತಿ ಕಲಿಯಬೇಕು ಎಂದರು.

ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ವಿಧ್ಯಾರ್ಥಿಗಳು ಪಾಲಕರಿಗೆ ಹಾಗೂ ಗುರು ಹಿರಿಯರಿಗೆ ಗೌರವ ನೀಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ಸಂಸ್ಕಾರ ಅಳವಡಿಸಿಕೊಳ್ಳಿ. ಶಿಕ್ಷಣವು ವ್ಯಕ್ತಿಯ ಮನಸ್ಸನ್ನು ಪರಿವರ್ತನೆ ಮಾಡಿ, ಅಜ್ಞಾನ ಹೋಗಲಾಡಿಸಿ ಬೆಳಕು ನೀಡುತ್ತದೆ ಎಂದರು.

ತಾಪಂ ಮಾಜಿ ಸದಸ್ಯ ಶರಣಪ್ಪ ಈಳಗೇರ್, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲ ಮಹಾಂತೇಶ ಬೂದಗುಂಪ, ಡಾ. ಮುತ್ತಣ್ಣ ಗುಜ್ಜಲ್ ಮಾತನಾಡಿದರು. ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಭೀಮಾಂಭಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅಧ್ಯಕ್ಷತೆ ವಹಿಸಿದ್ದರು.

ಭಾವನಾ ಗುಳದಳ್ಳಿ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸಂಗೀತ ಸೇವೆ ನೀಡಿದರು. 2025-26 ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿತು.

ಈ ಸಂದರ್ಭದಲ್ಲಿ ವಸಂತಕುಮಾರ ಭಾವಿಮನಿ, ಶರಣಪ್ಪಗೌಡ ಎಸ್.ಗೌಡರ, ಎಫ್.ಎ. ಕಳ್ಳಿ, ಕನಕಪ್ಪ ಕಂಬಳಿ, ಗುರುಮೂರ್ತಿ ಬಡಿಗೇರ್, ನಿಂಗಪ್ಪ ಹಳ್ಳಿಕೇರಿ, ಬಸವರಾಜ ಪ್ರಭಣ್ಣನವರ, ಯಮನಪ್ಪ ಹರಿಜನ, ಡಿ.ಎಚ್. ವಾಲಿಕಾರ, ರಮೇಶ ಚಿಕ್ಕಗೌಡ್ರ, ದೊಡ್ಡಯ್ಯ ಗುರುವಿನ, ದೇವಪ್ಪ ಬಾಂಡ್ಲಿ, ಎಂ.ಎನ್. ಜನಾದ್ರಿ, ಈರಪ್ಪ ರಾವಣಕಿ, ಭೀಮಣ್ಣ ಜರಕುಂಟಿ, ಬಸವರಾಜ ಮರಗಪ್ಪನವರ ಸೇರಿದಂತೆ ಇತರರು ಇದ್ದರು.

ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳು ಅಂಕ ಗಳಿಸುವ ಜತೆಗೆ ಬದುಕಿನಲ್ಲಿ ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ತಿಳಿಸಿದ್ದಾರೆ.