ಜನಪದ ಕಥಾ ಕಾವ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ

| Published : Jan 06 2025, 01:00 AM IST

ಸಾರಾಂಶ

ಚಾರಿತ್ರಿಕ ಘಟನೆ ಜನಪದರು ಕಟ್ಟಿ ಪ್ರಚುರಪಡಿಸಿದ ಜನಪದ ಕಥನ ಕಾವ್ಯ ಪರಿಣಾಮಕಾರಿಯಾಗಿ ಸಮಾಜಕ್ಕೆ ಸಂದೇಶ ನೀಡಿವೆ

ನರೇಗಲ್ಲ: ಚಾರಿತ್ರಿಕ ಜನಪದ ಕಥನ, ಕಾವ್ಯ ಕೇಳುವ ಹವ್ಯಾಸ ಯುವಕರು ಬೆಳಸಿಕೊಳ್ಳಬೇಕು. ನವಪೀಳಿಗೆಯ ಉದಾತ್ತ ಶಿಕ್ಷಣ ಸಂದರ್ಭದಲ್ಲಿ ಜನಪದ ಕಥನ ಕಾವ್ಯಗಳು ಉಪಯೋಗಕ್ಕೆ ಬರುತ್ತವೆ ಎಂದು ಶ್ರೀಮುಪ್ಪಿನ ಬಸವಲಿಂಗ ಸ್ವಾಮಿಗಳು ಹೇಳಿದರು.

ಸಮೀಪದ ಹಾಲಕೆರೆ ಶ್ರೀಅನ್ನದಾನೇಶ್ವರ ಸಂಸ್ಥಾನಮಠದ ಸಭಾ ಭವನದಲ್ಲಿ ಕರ್ನಾಟಕ ನಾಟಕ ಅಕಾಡಮಿ ಹಾಗೂ ಶ್ರೀಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಕಿವುಡ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ನಾಟಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಪ್ರದರ್ಶನ ಮಾಡಿದ ಕಡ್ಲಿಮಟ್ಟಿ ಕಾಶಿಬಾಯಿ ನಾಟಕ ವೀಕ್ಷಿಸಿ ಮಾತನಾಡಿದರು.

ಚಾರಿತ್ರಿಕ ಘಟನೆ ಜನಪದರು ಕಟ್ಟಿ ಪ್ರಚುರಪಡಿಸಿದ ಜನಪದ ಕಥನ ಕಾವ್ಯ ಪರಿಣಾಮಕಾರಿಯಾಗಿ ಸಮಾಜಕ್ಕೆ ಸಂದೇಶ ನೀಡಿವೆ. ಇಂತಹ ಜನಪದ ಕಥಾ ಕಾವ್ಯಗಳಲ್ಲಿ ಕಡ್ಲಿಮಟ್ಟಿ ಕಾಶಿಬಾಯಿ ಹಾಡು ಹೆಚ್ಚು ಪರಿಣಾಮ ಬೀರಿದೆ. ಅಂತಹ ಹಾಡನ್ನು ಕಿವುಡ ಮಕ್ಕಳು ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದು ಅದ್ಭುತವಾಗಿದೆ. ಹೆಣ್ಣುಶೀಲಕ್ಕೆ ನೀಡುವ ಮಹತ್ವ ಪರಿಣಾಮಕಾರಿಯಾದ ರೀತಿಯಲ್ಲಿ ಹೇಳುವ ಕಥೆ ಮನೋಜ್ಞವಾಗಿ ಕಿವುಡ ಮಕ್ಕಳು ಅಭಿನಯಿಸಿದ್ದಾರೆ. ಹೆತ್ತ ಮಗುವನ್ನಾದರೂ ಬಲಿಕೊಟ್ಟು ಶೀಲ ಕಾಪಾಡಿಕೊಂಡ ಕಾಶಿಬಾಯಿ ಇಂದಿನ ಜಗತ್ತಿಗೆ ಮಾದರಿ ಆಗಿದ್ದಾಳೆ ಎಂದರು.

ಶಿಬಿರದ ನಿರ್ದೇಶಕ ಆರ್.ಕೆ. ಭಗವಾನ ಮಾತನಾಡಿ, ಕಿವುಡ ಮಕ್ಕಳಿಗೆ ನಾಟಕ ಕಲಿಸುವುದು ಸವಾಲಿನ ಕೆಲಸ ಆಗಿದ್ದರೂ ಅವರ ಸಂಜ್ಞಾ ಭಾಷೆಯ ಮೂಲಕ 21 ದಿನ ಶಿಬಿರ ನಡೆಸಿ ನಾಟಕ ಕಟ್ಟಿದ್ದೇವೆ. ಕಾಶಿಬಾಯಿಯ ಅಂದಿನ ಘಟನೆ ಇಂದಿನ ಕಾಲಘಟ್ಟಕ್ಕೆ ಮುಖಾಮುಖಿಯಾಗಿಸಲು ಪ್ರತ್ನಿಸಿದ್ದೇವೆ. ಕರ್ನಾಟಕ ನಾಟಕ ಅಕಾಡೆಮಿಯ ಸಹಕಾರಕ್ಕೆ ವಿಶೇಷ ಅಭಿನಂದನೆ ಎಂದರು.

ಈ ವೇಳೆ ರವೀಂದ್ರನಾಥ ದೊಡ್ಡಮೇಟಿ, ಎನ್.ಆರ್. ಗೌಡರ, ಸಂಗಮೇಶ ಹೂಲಗೇರಿ, ಪ್ರೊ. ಕಲ್ಲಯ್ಯ ಹಿರೇಮಠ, ಅಶೋಕ ಕಡೆತೋಟದ, ಲಿಂಗರಾಜ ತಳಬಾಳ, ಎ.ಸಿ.ಮರಡಿಮಠ, ಶರಣಪ್ಪ ಅರಮನಿ, ಎಸ್. ಚಿಕ್ಕಮಠ ಇದ್ದರು. ಉಪನ್ಯಾಸಕ ಮುತ್ತಣ್ಣ ಹೊನವಾಡ ನಿರೂಪಿಸಿದರು.