ಗಡುವಿನೊಳಗೆ ಎಚ್‌ಎಸ್‌ಆರ್‌ ಪ್ಲೇಟ್‌ ಅಳವಡಿಸಿಕೊಳ್ಳಿ: ಸಾರಿಗೆ ಅಧಿಕಾರಿ ಮಧುರ

| Published : Feb 10 2024, 01:45 AM IST

ಗಡುವಿನೊಳಗೆ ಎಚ್‌ಎಸ್‌ಆರ್‌ ಪ್ಲೇಟ್‌ ಅಳವಡಿಸಿಕೊಳ್ಳಿ: ಸಾರಿಗೆ ಅಧಿಕಾರಿ ಮಧುರ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನಗಳ ಮಾಲೀಕರು ಅಂತಿಮ ಗಡುವಿನೊಳಗೆ ತಮ್ಮ ವಾಹನಗಳಿಗೆ ಹೈ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಕಲೇಶಪುರ ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿ ಮಧುರ ಹೇಳಿದರು. ಬೇಲೂರಿನ ಗುರುವಾರ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಾಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಲೂರು: ವಾಹನಗಳ ಮಾಲೀಕರು ಅಂತಿಮ ಗಡುವಿನೊಳಗೆ ತಮ್ಮ ವಾಹನಗಳಿಗೆ ಹೈ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಕಲೇಶಪುರ ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿ ಮಧುರ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಾಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಸುರಕ್ಷಿತ ಚಾಲನೆಗೆ ಹೆಚ್ಚಿನ ಆದ್ಯತೆ ನೀಡಿ ೧೯೬೬ ರಿಂದಲೂ ಇಂದಿನವರೆಗೆ ಸಾರಿಗೆ ಇಲಾಖೆಯಲ್ಲಿ ಪ್ರತಿನಿತ್ಯ ಕಾನೂನು ತಿದ್ದುಪಡಿ ಮಾಡುತ್ತಿದ್ದು, ವಾಹನಗಳ ಸಂಪೂರ್ಣ ಮಾಹಿತಿಯುಳ್ಳ ಎಚ್‌ಎಸ್‌ಆರ್‌ಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. ೨೦೧೯ ರಿಂದ ಆರಂಭವಾಗುವ ನೋಂದಣಿ ವಾಹನಗಳಿಗೆ ಕಡ್ಡಾಯವಾಗಿ ಹೈ ಸೆಕ್ಯೂರಿಟಿ ಪ್ಲೇಟ್ ಅಳವಡಿಸಲು ತಿಳಿಸಲಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ಫೆ. ೧೭ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪಟ್ಟಣದಲ್ಲಿ ವಾಹನಗಳ ದಟ್ಟಣೆಯಿಂದ ಪ್ರತಿನಿತ್ಯ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಬೇಲೂರಿಗೆ ಬರುವ ಪ್ರವಾಸಿಗರು, ಸ್ಥಳೀಯರು ಮತ್ತು ಪಾದಚಾರಿಗಳು ಓಡಾಡಲು ತೊಂದರೆಯಾಗುತ್ತಿದೆ. ಅಲ್ಲದೆ ವಾಹನಗಳನ್ನು ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಕೆಲ ಸಮಯ ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲುವಂತಾಗಿದೆ. ಆದ್ದರಿಂದ ಸುಗಮ ಸಂಚಾರಕ್ಕಾಗಿ ಶೀಘ್ರದಲ್ಲೆ ಪಾದಚಾರಿ ತೆರವು ಕಾರ್ಯಾಚರಣೆ ನಡೆಸಿ ಅಲ್ಪಮಟ್ಟಿಗಾದರೂ ಟ್ರಾಫಿಕ್ ಸಮಸ್ಯೆ ನೀಗಿಸಲು ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು. ವಾಹನಗಳ ಸವಾರರೂ ಸಹ ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದರು.

ಸಾಹಿತಿ ನವಾಬ್, ತಹಸೀಲ್ದಾರ್ ಎಂ.ಮಮತ, ಸಾರಿಗೆ ಇನ್‌ಸ್ಪೆಕ್ಟರ್ ಆಶಾ, ಅಗ್ನಿಶಾಮಕದಳದ ಇನ್‌ಸ್ಪೆಕ್ಟರ್ ಜವರಯ್ಯ, ಎಎಸ್‌ಐ ವಿರೂಪಾಕ್ಷ ಇದ್ದರು.ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷಾ ಜಾಗೃತಿ ಸಪ್ತಾಹ ಉದ್ಘಾಟಿಸುತ್ತಿರುವ ಸಾರಿಗೆ ಅಧಿಕಾರಿ ಮಧುರ ಮತ್ತಿತರರು ಇದ್ದರು.