ಬಾಬು ಜಗಜೀವನರಾಮ್ ಆದರ್ಶ ಅಳವಡಿಸಿಕೊಳ್ಳಿ: ಚಂದ್ರಶೇಖರ

| Published : Apr 06 2024, 12:46 AM IST

ಬಾಬು ಜಗಜೀವನರಾಮ್ ಆದರ್ಶ ಅಳವಡಿಸಿಕೊಳ್ಳಿ: ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಾಬು ಜಗಜೀವನರಾಮ್ ಅವರ ಸಾಧನೆ ಅಪಾರವಾಗಿದೆ. ಅಂತಹ ಮಹಾನ್ ವ್ಯಕ್ತಿ ನೀಡಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.

ರಾಯಚೂರು: ಡಾ.ಬಾಬು ಜಗಜೀವನರಾಮ್ ಅವರು ಭಾರತ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅನೇಕ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿದ್ದು, ಅವರ ಸಾಧನೆ ಅಪಾರವಾಗಿದೆ. ಅಂತಹ ಮಹಾನ್ ವ್ಯಕ್ತಿ ನೀಡಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ಸ್ಥಳೀಯ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಅವರ 117ನೇ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಸಮಾಜದಲ್ಲಿ ಸಮಾನತೆಯ ಅರಿವು ಮೂಡಿಸಲು ಹಾಗೂ ದೇಶದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಶ್ರಮದಿಂದ ಕಾರ್ಯನಿರ್ವಹಿಸಿದ್ದರು. ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದದ್ದು ಎಂದರು.

ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಲು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಶ್ರಮಿಸಬೇಕಾಗಿದೆ ಎಂದರು.

ಇದೇ ವೇಳೆ ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಉಪನ್ಯಾಸ ನೀಡಿ, ಡಾ.ಬಾಬು ಜಗಜೀವನ್ ರಾಮ್ ಅವರು ಕೃಷಿ, ಶಿಕ್ಷಣ ಸೇರಿದಂತೆ ಇನ್ನಿತರ ವಲಯಗಳಲ್ಲಿ ಸಾಕಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದು, ಸಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಬಹುಮುಖ್ಯವಾದದ್ದು, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ, ಪಶುಪಾಲನಾ, ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಅಶೋಕ ಕೋಲ್ಕಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.