ಸಾರಾಂಶ
ಗದಗ: ಕೃಷಿ ಇಲಾಖೆಯಲ್ಲಿರುವ ಯೋಜನೆ ರೈತರು ಸದುಪಯೋಗಪಡಿಸಿಕೊಂಡು, ಕೃಷಿಯಲ್ಲಿ ನವೀನ ತಾಂತ್ರಿಕತೆ ಅಳವಡಿಕೊಳ್ಳಬೇಕು ಎಂದು ಉಪಕೃಷಿ ನಿರ್ದೇಶಕಿ ಸ್ಪೂರ್ತಿ.ಜಿ.ಎಸ್ ಹೇಳಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆವಿಕೆಯಲ್ಲಿ ಕೃಷಿ ಇಲಾಖೆ, ಆತ್ಮ ಯೋಜನೆ ಗದಗ ಹಾಗೂ ಐಸಿಎಆರ್, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ರೈತ ದಿನಾಚರಣೆ ಅಂಗವಾಗಿ ಕಿಸಾನ್‌ಗೋಷ್ಠಿ ಹಾಗೂ ರೈತರ-ವಿಜ್ಞಾನಿಗಳ ಚರ್ಚಾಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೊಸ ಹೊಸ ತಳಿ ಬಳಸಿ, ಲಘುಪೋಷಕಾಂಶ ಹಾಗೂ ಸಾವಯವ ಕೃಷಿ ಕೈಗೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸಾವಲಂಭಿಗಳಾಗಬೇಕು ಎಂದ ಅವರು, ಮೇಟಿ ಹಿಡಿದು, ಬೆನ್ನು ಬಾಗಿಸಿ ಎಂಬ ನಾಣ್ಣುಡಿ ವಿವರಿಸುತ್ತಾ, ರೈತ ದಿನಾಚರಣೆಯ ಮಹತ್ವ ತಿಳಿಸಿ, ರೈತರು ಕೃಷಿ ಇಲಾಖೆಯೊಂದಿಗೆ ಉತ್ತಮ ಸಂಬಂಧ ಹೊಂದುವಂತೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಗೀತಾ ಚನ್ನಾಳ ಮಾತನಾಡಿ, ಸಾವಯವ ಕೃಷಿಗೆ ಒತ್ತು ಕೊಟ್ಟು, ಕೃಷಿಯೊಂದಿಗೆ ಉಪ ಕಸುಬು ಮಾಡಬೇಕೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ ಕೆವಿಕೆ ಮುಖ್ಯಸ್ಥೆ ಡಾ.ಸುಧಾ ವಿ. ಮಂಕಣಿ ಮಾತನಾಡಿ, ಮಣ್ಣಿನ ಸಂರಕ್ಷಣೆ ಕಾಪಾಡಿಕೊಳ್ಳಲು ಸಾವಯವ, ಜೈವಿಕ ಗೊಬ್ಬರ ಕೃಷಿಯಲ್ಲಿ ಬಳಕೆ ಮಾಡಬೇಕು. ಜತೆಗೆ ಕೃಷಿಯೊಂದಿಗೆ ಉಪಕಸಬು ಅಳವಡಿಸಿಕೊಂಡು, ಕೃಷಿ ಸಂಸ್ಕರಣೆಗಳಂತಹ ಗುಡಿ ಕೈಗಾರಿಕೆ ಮಾಡಿ, ಮೌಲ್ಯವರ್ಧನೆಗೆ ಒತ್ತು ನೀಡಿ. ಸಿರಿಧಾನ್ಯ ಬೆಳೆಸಿ, ದಿನ ನಿತ್ಯ ಬಳಕೆ ಮಾಡುವುದರಿಂದ ನಮ್ಮ ಆರೋಗ್ಯವು ಸಮತೋಲನವಾಗಿರುತ್ತದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ಕೃಷಿ ಮತ್ತು ಕೃಷಿಗೆ ಸಂಬಂಧಿತ ತರಬೇತಿ, ವಿವಿಧ ಕೌಶಲ್ಯ, ಜ್ಞಾನ, ತಾಂತ್ರಿಕ ಮಾಹಿತಿ, ತೋಟಗಾರಿಕಾ ಬೆಳೆಗಳು, ವಿವಿಧ ಬೆಳೆಗಳ ರೋಗ ಹಾಗೂ ಕೀಟಗಳ ನಿಯಂತ್ರಣ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.
ಈ ವೇಳೆ ರೋಣ ಉಪ ಕೃಷಿ ನಿರ್ದೇಶಕ-2 ಪಾಲಕ್ಷಗೌಡ ಮಾತನಾಡಿದರು. ಜಿಲ್ಲೆಯಿಂದ ಆಗಮಿಸಿದ ವಿವಿಧ ರೈತ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಪರ ರೈತರಿಂದ ಅನಿಸಿಕೆ ಹಾಗೂ ಚರ್ಚಾಗೋಷ್ಠಿ ನಡೆಯಿತು. ವಿವಿಧ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ರೈತ ಬಾಂಧವರಿಗೆ ಹಾಗೂ ಆತ್ಮ ಯೋಜನೆಯಡಿ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ರೈತ, ರೈತ ಮಹಿಳೆಯರಿಗೆ ಕೃಷಿ ಇಲಾಖೆಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಬಿಜೆಪಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಎಸ್. ಪಾಟೀಲ, ಕೃಷಿಕ ಸಮಾಜ ತಾಲೂಕಾಧ್ಯಕ್ಷ ತಿರಕಪ್ಪ ಬೋಳನ್ನವರ, ಈಶ್ವರಪ್ಪ ಗುಜಮಾಗಡಿ, ವಿಜಯ ಕುಮಾರ ಸಂಕದ ಸೇರಿದಂತೆ ವಿವಿಧ ರೈತ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ರೈತರು ಇದ್ದರು. ಬಸಲಿಂಗಪ್ಪ ಹಾಲವರ ನಿರೂಪಿಸಿದರು. ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ವಂದಿಸಿದರು.