ಧಾರವಾಡ:
ಮಹಿಳೆಯರು ಬಿಟ್ಟಿ ಭಾಗ್ಯಗಳಿಗೆ ಬೆನ್ನು ಬೀಳದೆ ಕಾಯಕ, ದಾಸೋಹ ನೀತಿ ಅಳವಡಿಸಿಕೊಂಡು ಸ್ವಾವಲಂಬಿ ಬದುಕು ಸಾಗಿಸಬೇಕೆಂದು ಸಾಹಿತಿ ಹಾಗೂ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.ಚನ್ನಬಸವೇಶ್ವರ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದ ಪೂರ್ವದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಬದುಕಬೇಕಿದ್ದ ಸಂದಿಗ್ಧ ಪರಿಸ್ಥಿತಿಯಿತ್ತು. ಪುರುಷ ಪ್ರಧಾನ ಸಮಾಜದಿಂದ ಮುಕ್ತರನ್ನಾಗಿ ಮಾಡಿ ಸ್ತ್ರಿಯರಿಗೂ ಸಮಾನತೆ ಹಕ್ಕು ದೊರಕುವಂತೆ ಮಾಡಿದ ಕೀರ್ತಿ ಅಕ್ಕ ಮಹಾದೇವಿಗೆ ಸಿಗಲಿದೆ ಎಂದರು.
ಇಷ್ಟಲಿಂಗ ಪೂಜೆ, ಧ್ಯಾನ, ವಚನ ಪಠಣ, ಅಧ್ಯಯನದಿಂದ ಮಹಿಳೆಗೆ ಎಲ್ಲ ಕಷ್ಟ ಮೆಟ್ಟಿ ನಿಲ್ಲುವ ಶಕ್ತಿ ಬರುತ್ತದೆ. ಕೆಲ ರೋಗದಿಂದ ದೂರ ಉಳಿಯಲು ಕೂಡ ಸಹಕಾರಿಯಾಗಿದೆ. ಇದನ್ನು ಮಹಿಳೆಯರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಮಹಾನಗರ ಪಾಲಿಕೆ ಉಪ ಆಯುಕ್ತೆ ಅನುರಾಧಾ ವಸ್ತ್ರದ ಮಾತನಾಡಿ, ಜಗತ್ತಿನ ಮೊದಲ ಕವಯತ್ರಿ, ಸ್ತ್ರೀ ಸ್ವಾತಂತ್ರ್ಯದ ಮುಕುಟಮಣಿ ಅಕ್ಕಮಹಾದೇವಿ ತಾಯಿ ನಮಗೆಲ್ಲರಿಗೂ ಸದಾ ಸ್ಮರಣೀಯರು. ಅವರನ್ನು ನಿತ್ಯ ನೆನೆಯುವ ಜತೆಗೆ ಅವರು ಕೊಟ್ಟ ಸಂದೇಶಗಳಂತೆ ಸಾಗಬೇಕು ಎಂದರು.
ಪ್ರೊ. ವಿ.ಸಿ. ಸವಡಿ ಅಧ್ಯಕ್ಷತೆ ವಹಿಸಿದ್ದರು. ಕುಮಾರ ಬೆಕ್ಕೇರಿ, ಡಾ. ಸುವರ್ಣಾ ಬಿರಾದಾರ ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ನಂತರ ರತಿಕಾ ನೃತ್ಯ ನಿಕೇತನ ವಿದ್ಯಾರ್ಥಿನಿಯರಿಂದ ಅಕ್ಕಮಹಾದೇವಿ ವಚನಗಳ ನೃತ್ಯ ರೂಪಕ ಜರುಗಿತು. ಮಹಾಸಭಾ ರಾಜ್ಯ ಉಪಾಧ್ಯಕ್ಷೆ ಸವಿತಾ ಅಮರಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸುಧಾ ಕಬ್ಬೂರ ನಿರೂಪಿಸಿದರು. ಡಾ. ಪಾರ್ವತಿ ಹಾಲಭಾವಿ ಸ್ವಾಗತಿಸಿದರು, ಕವಿತಾ ಕೆ.ಎಸ್. ವಂದಿಸಿದರು.