ಸಾರಾಂಶ
ಯಲ್ಲಾಪುರ: ವಿದ್ಯೆಯಿಂದ ವಿನಯ ವಿನೀತವಂತನಾಗಬೇಕು. ಅದರಿಂದ ಮಾಹಿತಿಗಳ ಸಂಗ್ರಹ ಸಾಧ್ಯ. ವಿದ್ಯೆಯೊಂದಿಗೆ ದಯೆ, ಕ್ಷಮೆ, ಸತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿನಯತೆಗೆ ಬೆಲೆ ಬಂದೀತು ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಡಿ. ೩ರಂದು ತಾಲೂಕಿನ ಭರತನಹಳ್ಳಿಯ ಪ್ರಗತಿ ಸಂಕೀರ್ಣದಲ್ಲಿ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆ, ಪ್ರಗತಿ ಸುವರ್ಣ ಮಹೋತ್ಸವ ಸಮಿತಿ, ಪ್ರಗತಿಪೂರ್ವ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ನೂತನ ಕಟ್ಟಡದ ಶಿಲಾನ್ಯಾಸ, ಗೌರವ ಸಮ್ಮಾನ, ಸ್ನೇಹಸಮ್ಮಿಲನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ, ಶಿಲಾನ್ಯಾಸ ನೆರವೇರಿಸಿ, ಆಶೀರ್ವಚನ ನೀಡಿದರು.ಒಳ್ಳೆಯ ಗುಣಗಳನ್ನು ಹೊಂದಿದ ಯಾವುದೇ ವಿನಯವಂತರು ಸಮಾಜದಲ್ಲಿ ತಗ್ಗಿ- ಬಗ್ಗಿ ನಡೆಯುತ್ತಾರೆ. ಇಂತಹ ಗುಣ ಸಂಪಾದನೆಗೆ ಭಗವದ್ಗೀತೆ ದಾರಿದೀಪವಾಗಿದೆ. ಸಹಕಾರಿ ಮತ್ತು ಶಿಕ್ಷಣ ಸಂಸ್ಥೆಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವ ಎಲ್ಲ ಪ್ರದೇಶಗಳಲ್ಲೂ ಲಕ್ಷ್ಮಿ ಮತ್ತು ಸರಸ್ವತಿ ದೇವಿಯರು ನೆಲೆಸಿರುತ್ತಾರೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡು ಜನರ ಜೀವನಾಡಿಯಾಗಿರುವ ಉತ್ತಮ ಸಂಘ- ಸಂಸ್ಥೆಗಳು ಉಳಿದು ಬೆಳೆಯಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಗತಿ ಶಿಕ್ಷಣ ಸಂಸ್ಥೆ ತನ್ನ ಹೆಸರಿಗೆ ಅನ್ವರ್ಥಕವಾಗಿ ಕಳೆದ ೫೦ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದೋಂದಿಗೆ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಸಂಸ್ಥೆ ೫೦ ವರ್ಷ ಪೂರ್ಣಗೊಳಿಸಿರುವುದು ಸಂದರ್ಭದಲ್ಲಿ ಇದೇ ವೇದಿಕೆಯಲ್ಲಿ ವರ್ಷವಿಡೀ ಆಚರಣೆಗೊಳ್ಳಲಿರುವ ಸುವರ್ಣ ಮಹೋತ್ಸವಕ್ಕೂ ಚಾಲನೆ ನೀಡಲಾಗಿದೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ತವರೂರು, ಹೆತ್ತವರು ಮತ್ತು ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು ಎಂದರು.ನೂತನವಾಗಿ ನಿರ್ಮಿಸಲಾಗುವ ಶಿಕ್ಷಣ ಸಂಸ್ಥೆಯ ಕಟ್ಟಡ ಕಾಮಗಾರಿಗೆ ತನ್ನ ಶಾಸಕರ ನಿಧಿಯಿಂದ ₹೧೦ ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು. ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ಅನಾವರಣಗೊಳಿಸಿದ ವಿ.ಯೋ. ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮಾವಿನಕಟ್ಟಾದ ನಿರ್ಮಾತೃ ದಿ. ಎನ್.ಎಸ್. ಹೆಗಡೆ ಕುಂದರಗಿಯವರನ್ನು ಸ್ಮರಿಸಬೇಕಾದುದು ಔಚಿತ್ಯಪೂರ್ಣ. ಅದೇ ರೀತಿ ಹೊರಟ್ಟಿಯವರೂ ಅಪರೂಪದ ಶಿಕ್ಷಣಾಭಿಮಾನಿ. ಸ್ವಾತಂತ್ರ್ಯಾನಂತರ ನಡೆದ ವಿವಿಧ ಕ್ರಾಂತಿಗಳ ಸಾಲಿನಲ್ಲಿ ಇದೀಗ ಸ್ವರ್ಣವಲ್ಲೀ ಶ್ರೀಗಳು ಆರಂಭಿಸಿರುವ ಭಗವದ್ಗೀತಾ ಅಭಿಯಾನವೂ ಮಹತ್ವದ ಧಾರ್ಮಿಕ ಕ್ರಾಂತಿಯ ಸ್ಥಾನ ಪಡೆದಿದೆ ಎಂದರು.ಶಾಸಕ ಶಿವರಾಮ ಹೆಬ್ಬಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಯೋಜಿತ ಸಭಾಭವನದ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ವಿತರಿಸಿದರು. ನಿವೃತ್ತ ಶಿಕ್ಷಕ ಎಂ.ಟಿ. ಪಟಗಾರ ಮಾತನಾಡಿದರು. ಕುಂದರಗಿ ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ, ಪಿಡಿಒ. ರವಿ ಪಟಗಾರ ವೇದಿಕೆಯಲ್ಲಿದ್ದರು. ಶ್ರೀಮಠದ ಭಗವದ್ಗೀತಾ ಅಭಿಯಾನಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಭಗವದ್ಗೀತೆಯ ೯ನೇ ಅಧ್ಯಾಯ ಪಠಿಸಿದರು. ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ನೀಡಿದವರನ್ನು ಮತ್ತು ವಿವಿಧ ಕ್ಷೇತ್ರದ ಸ್ಥಳೀಯ ಸಾಧಕ ಹಿರಿಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಹೇರಂಭ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಶಿಕ್ಷಕರಾದ ಆದಿತ್ಯ ಶಂಕರ ಮತ್ತು ಪ್ರಕಾಶ ಭಟ್ಟ ನಿರ್ವಹಿಸಿದರು. ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ವಂದಿಸಿದರು.