ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥಗೌಡ ಹೇಳಿದರು.ತಾಲೂಕಿನ ಅರಳಕುಪ್ಪೆ ರೈತ ದೇವರಾಜು ಅವರ ಜಮೀನಿನಲ್ಲಿ ತಾಪಂ, ಜಿಪಂ, ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ ಹಾಗೂ ಇಪ್ಕೋ ಫಾರ್ಮರ್ಸ್ ಫರ್ಟಿಲೈಸರ್‍ಸ್ ಕೋ-ಅಪರೇಟಿವ್ ಸಹಕಾರದೊಂದಿಗೆ ನಡೆದ ಡ್ರೋಣ್ ಬಳಕೆ ಮೂಲಕ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಕೃಷಿ ಮೇಲೆ ಸಂಪೂರ್ಣ ಅವಲಂಬಿತರಾಗಿ ಉತ್ತಮ ಬೆಳೆ ಬೆಳೆಯಬೇಕು ಎಂಬ ಭಾವನೆ ಇದೆಯಾದರೂ ಕೃಷಿ ಕಾರ್ಮಿಕರ ಸಮಸ್ಯೆಯಿಂದ ವ್ಯವಸಾಯದಿಂದ ವಿಮುಖರಾಗುವ ಪರಿಸ್ಥಿತಿ ತಲೆದೋರಿದೆ. ಈ ಸಮಸ್ಯೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕುಲಾಂತರಿ ತಳಿಗಳಿಂದ ಎಷ್ಟು ಅನುಕೂಲವಿದೆಯೋ, ಅಷ್ಟೇ ಅನಾನುಕೂಲ ಕೂಡ ಇದೆ. ರೈತರು ಆದಷ್ಟು ದೇಶಿ ತಳಿಗಳ ಮೇಲೆ ಅವಲಂಬಿತರಾಗುವ ಜತೆಗೆ ಕುಲಾಂತರಿ ತಳಿಗಳನ್ನು ವಿರೋಧಿಸಬೇಕು ಎಂದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಟ್ರ್ಯಾಕ್ಟರ್, ಟಿಲ್ಲರ್ ಇತ್ಯಾದಿ ಆಧುನಿಕ ಕೃಷಿ ಯಂತ್ರೋಪಕರಣಗಳು ಇಲ್ಲವಾಗಿದ್ದರೆ ರೈತರ ಜಮೀನು ಪಾಳು ಬಿಡಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು ಎಂದರು.ಇಂದು ಗದ್ದೆ ನಾಟಿ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಡ್ರೋಣ್ ಬಳಕೆ ಮೂಲಕ ರಸಗೊಬ್ಬರ ಸಿಂಪಡಣೆ ಮಾಡುವ ತಂತ್ರಜ್ಞಾನ ರೈತರಿಗೆ ಅನುಕೂಲವಾಗಿದೆ. ಇದರಿಂದ ಒಂದೇ ದಿನದಲ್ಲಿ ನೂರಾರು ಎಕರೆ ಜಮೀನಿಗೆ ರಸಗೊಬ್ಬರ ಸಿಂಪಡಿಸಬಹುದಾಗಿದೆ ಎಂದು ಹೇಳಿದರು.
ಇಪ್ಕೋ ಸಂಸ್ಥೆ ಮಾರುಕಟ್ಟೆ ಅಧಿಕಾರಿ ಲಕ್ಷ್ಮೀಶ ಮಾತನಾಡಿ, ರಸಗೊಬ್ಬರ ಹಾಕಿದರೆ ಇಳುವರಿ ಹೆಚ್ಚುತ್ತದೆ ಎಂದು ಯಥೇಚ್ಚವಾಗಿ ಬಳಕೆ ಮಾಡುವುದು ತಪ್ಪು. ಅಧಿಕ ಇಳುವರಿ ಪಡೆಯಲು ಭೂಮಿ ಫಲವತ್ತತೆಯಾಗಿರಬೇಕು. ಪೋಷಾಕಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸಬೇಕು ಎಂದು ತಿಳಿಸಿದರು.ಕಬ್ಬಿನ ತರಗಿಗೆ ಬೆಂಕಿ ಹಾಕಿ ಸುಟ್ಟು ಹಾಕಿದರೆ ಭೂಮಿಯ ಸತ್ವ ನಾಶವಾಗುತ್ತದೆ. ಅದರ ಬದಲು ಜಮೀನಿನಲ್ಲಿ ಕೊಳೆಯಲು ಬಿಡಬೇಕು. ಜತೆಗೆ ಹಸಿ ಕಸಗಳ ಬಳಕೆಯಿಂದ ಭೂಮಿಯ ತಾಕತ್ತು ಹೆಚ್ಚುತ್ತದೆ ಎಂದು ವಿವರಿಸಿದರು.
ಅರಳಕುಪ್ಪೆ ಗ್ರಾಮದ ದೇವರಾಜು ಎಂಬುವವರ ಒಂದು ಎಕರೆ ಜಮೀನಿಗೆ ಡ್ರೋಣ್ ಬಳಕೆ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಆರ್.ಚನ್ನಕೇಶವ, ಉಪಾಧ್ಯಕ್ಷ ದೇವೇಗೌಡ, ನಿರ್ದೇಶಕರಾದ ಉಮಾಶಂಕರ್, ದೇವರಾಜು, ಪುಟ್ಟರಾಜು, ಕೃಷಿ ಇಲಾಖೆ ಎಡಿ ಮಂಜುನಾಥ್, ಕೃಷಿ ಅಧಿಕಾರಿ ಶೃತಿ, ರೇಷ್ಮೆ ಇಲಾಖೆ ಎಡಿ ರವಿಕುಮಾರ್, ತೋಟಗಾರಿಕೆ ಇಲಾಖೆ ಎಡಿ ಪ್ರಸನ್ನ, ಇಫ್ಕೋ ಫೆಡರೇಷನ್ ನಿರ್ದೇಶಕರಾದ ಮಹದೇವು, ಚಲುವರಾಜು, ಗುರುಸ್ವಾಮಿ ಇತರರು ಇದ್ದರು.