ದೇಶದಲ್ಲಿ ಶೆ.೭೦ರಷ್ಟು ರೈತರು ಕೃಷಿ ಅವಲಂಬಿಸಿದ್ದಾರೆ. ರೈತರಿಗೆ ಕೃಷಿ ಇಲ್ಲದೆ ಬೇರೆ ಬದುಕಿಲ್ಲ
ಯಲಬುರ್ಗಾ: ಪ್ರತಿಯೊಬ್ಬ ರೈತರು ಕೃಷಿ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರೇವಣಪ್ಪ ಸಂಗಟಿ ಹೇಳಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ ಸಹಯೋಗದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಶೆ.೭೦ರಷ್ಟು ರೈತರು ಕೃಷಿ ಅವಲಂಬಿಸಿದ್ದಾರೆ. ರೈತರಿಗೆ ಕೃಷಿ ಇಲ್ಲದೆ ಬೇರೆ ಬದುಕಿಲ್ಲ. ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು. ತಾಲೂಕು ಕೃಷಿಕ ಸಮಾಜದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಸಂಚರಿಸಿ ಆಸಕ್ತರಿಗೆ ಸದಸ್ಯತ್ವ ನೀಡಲಾಗುವುದು. ಸಾವಯವ ಕೃಷಿ ಹಾಗೂ ಇಳುವರಿ ಹೆಚ್ಚಿಸುವ ದೃಷ್ಠಿಯಿಂದ ರೈತರಲ್ಲಿ ಜಾಗೃತಿ ಮೂಡಿಸಲು ಕನ್ನೇರಿ ಮಠದ ಶ್ರೀಗಳನ್ನು ಆಹ್ವಾನಿಸಿ ದೊಡ್ಡ ಪ್ರಮಾಣದ ರೈತ ಸಮಾವೇಶ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಭೂಮಿಯ ಫಲವತ್ತತೆ ಕಾಪಾಡುವುದರಿಂದ ಯಾವುದೇ ಬೆಳೆ ಬೆಳೆದರೂ ಹೆಚ್ಚು ಇಳುವರಿ ಕೊಡಲು ಸಹಕಾರಿಯಾಗುತ್ತದೆ. ಕೃಷಿ ಚಟುವಟಿಕೆ ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಬೆಲೆ ಸಿಗದಿರುವುದು ಅನೇಕ ಸಮಸ್ಯೆಗಳಿವೆ ರೈತರು ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಕೃಷಿಕ ಸಮಾಜದ ತಾಲೂಕು ಸಂಗಣ್ಣ ತೆಂಗಿನಕಾಯಿ, ರುದ್ರಪ್ಪ ಕೊಪ್ಪದ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತರು ಕೃಷಿ ಅಧಿಕಾರಿಗಳೊಂದಿಗೆ ಬೆಳೆ ವಿಮೆ ಪರಿಹಾರ, ಬೆಂಬಲ ಬೆಲೆ, ಬೆಳೆಹಾನಿ ಪರಿಹಾರ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಬಸಯ್ಯ ಮಠದ, ರುದ್ರಪ್ಪ ಗೆದಗೇರಿ, ಶಿವಣ್ಣ ಬಂಡಿಹಾಳ, ಕೃಷಿ ಕಾರ್ಮಿಕ ರೈತ ಸಂಘದ ಅಧ್ಯಕ್ಷ ನೀಲಪ್ಪ ಐನಕ್ಕಿ, ಮಲ್ಲಿಕಾರ್ಜುನ ಸಜ್ಜನ, ಗವಿಸಿದ್ದಪ್ಪ ಐನಕ್ಕಿ, ಬಸಯ್ಯಸ್ವಾಮಿ ಮಲ್ಲಾಪುರಮಠ, ಮುಕುಂದ ಅಮೀನಗಡ, ಶಿವಪ್ಪ ಬಂಡಿಹಾಳ, ಕೃಷಿ ಅಧಿಕಾರಿ ಎಸ್.ಸಿ.ಚಿಂಚಲಿ, ಶಿವಪ್ಪ ಕೊಂಡಗುರಿ, ಹನುಮರಡ್ಡಿ ಅಬ್ಬಿಗೇರಿ, ಕಳಕಪ್ಪ, ಬೆಳೆ ವಿಮೆ ಕಂಪನಿಯ ಕಳಕಪ್ಪ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.