ಸೇವಾಲಾಲ್‌ ತತ್ವಾದರ್ಶ ಅಳವಡಿಸಿಕೊಳ್ಳಿ: ಶಶಿಕಾಂತ

| Published : Feb 16 2024, 01:45 AM IST

ಸಾರಾಂಶ

ರಾಯಚೂರು ಜಿಲ್ಲಾಡಳಿತದಿಂದ ಸಂತ ಸೇವಾಲಾಲ್‌ ಜಯಂತಿ ಆಚರಣೆ ಕಾರ್ಯಕ್ರಮವನ್ನು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸಮಾಜದಲ್ಲಿದ್ದ ಮೌಢ್ಯತೆಗಳನ್ನು ತೊಲಗಿಸುವಲ್ಲಿ ಮತ್ತು ತಮ್ಮ ವಿಚಾರಗಳ ಮೂಲಕ ಸಮಾಜದ ಅಭಿವೃದ್ಧಿಗೆ ಸಂತ ಸೇವಾಲಾಲ್‌ ಅವರ ಕೊಡುಗೆ ಅಪಾರವಾಗಿದ್ದು, ಅವರು ಸಮಾಜಕ್ಕೆ ನೀಡಿದ ಉತ್ತಮ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಹೇಳಿದರು.

ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಸಂತ ಸೇವಾಲಾಲ್‌ ತಮ್ಮ ಜೀವನವನ್ನು ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದರು. ಜೊತೆಗೆ ಸೇವಾಲಾಲ್‌ರು ಪ್ರಕೃತಿ ಆರಾಧಕರಾಗಿದ್ದರು. ಪ್ರಕೃತಿಯನ್ನು ಸಂರಕ್ಷಿಸುವ ಕುರಿತು ಅನೇಕ ಸಂದೇಶಗಳನ್ನು ಸಮಾಜಕ್ಕೆ ನೀಡಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೇಶಕ ತಿಪ್ಪಣ್ಣ ನಾಯಕ ಉಪನ್ಯಾಸ ನೀಡಿ, ಮಹಿಳೆಯರನ್ನು ಸಮಾನತೆಯ ಹಾದಿಗೆ ತಂದು, ಮೌಡ್ಯತೆಯಲ್ಲಿರುವ ಜನರನ್ನು ತಮ್ಮ ಜೀವನ ಸಂದೇಶಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸಂತ ಸೇವಾಲಾಲ್‌ರ ಪಾತ್ರ ಅಪಾರವಾದದ್ದು ಎಂದು ಹೇಳಿದರು.

ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ ಮಾತನಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಸುರೇಶ ವರ್ಮಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಸಮಾಜದ ಮುಖಂಡರಾದ ನಾರಾಯಣ ನಾಯಕ, ಲಚ್ಚಪ್ಪ ನಾಯಕ, ಶಿವಣ್ಣ ಪವಾರ, ಹನುಮಂತು ಚೌಹಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂತ ಸೇವಾಲಾಲ್‌ ಭಾವಚಿತ್ರ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಲ್ಲಿ ಸಂತ ಸೇವಾಲಾಲ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ವಿವಿಧ ಕಲಾ ತಂಡಗಳೊಂದಿಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದವರೆಗೆ ಆಗಮಿಸಲಾಯಿತು. ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಡಾ.ಶಿವಕುಮಾರ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಮಾಜದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.