ಸಿದ್ದಪ್ಪಜ್ಜನ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ

| Published : Apr 04 2025, 12:46 AM IST

ಸಿದ್ದಪ್ಪಜ್ಜನ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿಪಂದ್ಯಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಉಣಕಲ್ಲ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯ ಏರ್ಪಡಿಸುವ ಮೂಲಕ ಯುವಕರಿಗೆ ಕುಸ್ತಿ ಪಂದ್ಯದ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯ ಕೈಗೊಂಡಿರುವುದು ಸ್ವಾಗತಾರ್ಹ

ಹುಬ್ಬಳ್ಳಿ: ಸಾರ್ಥಕ ಬದುಕಿನ ಬಗ್ಗೆ ತಮ್ಮ ತತ್ವ, ಸಿದ್ಧಾತಗಳಿಂದ ಜನಮನ ತಿಳಿಗೊಳಿಸಿದ ಹಟಯೋಗಿ ಸಿದ್ದಪ್ಪಜ್ಜನ ಸಂದೇಶಗಳನ್ನು ನಾವೆಲ್ಲರೂ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹುಬ್ಬಳ್ಳಿಯ ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ಅವರು ಇಲ್ಲಿನ ಉಣಕಲ್ಲ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ ಅಂಗವಾಗಿ ಕಳೆದ ಮೂರು ದಿನಗ‍ಳಿಂದ ಜರುಗಿದ ರಾಜ್ಯ ಮಟ್ಟದ ಭಾರಿ ಬಯಲು ಜಂಗೀ ಕಾಟಾ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಿಗೆ ಗುರುವಾರ ಸಂಜೆ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಳಾಗಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿಪಂದ್ಯಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಉಣಕಲ್ಲ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯ ಏರ್ಪಡಿಸುವ ಮೂಲಕ ಯುವಕರಿಗೆ ಕುಸ್ತಿ ಪಂದ್ಯದ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯ ಕೈಗೊಂಡಿರುವುದು ಸ್ವಾಗತಾರ್ಹ. ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ಮಠಾಧೀಶರಿಂದ ಪ್ರವಚನ, ಕುಸ್ತಿ ಪಂದ್ಯಾವಳಿ, ಧಾರ್ಮಿಕ ಸಭೆ, ಗಾಡಾ ಸ್ಪರ್ಧೆ ಸೇರಿದಂತೆ ಹಲವು ವಿವಿಧ ದೇಶಿ ಕ್ರೀಡಾ ಚಟುವಟಿಕೆಗಳು ಆಯೋಜಿಸುವ ಮೂಲಕ ಮಕ್ಕಳಿಗೆ ದೇಶಿ ಕಲೆ, ಸಂಸ್ಕೃತಿ ತಿಳಿಸುವ ಕಾರ್ಯ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.

ಇದೇ ಸಂದರ್ಭದಲ್ಲಿ ಉಣಕಲ್ಲಿನ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿದರು, ಸದಸ್ಯರಾದ ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಬೆಂಗೇರಿ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಸೇರಿದಂತೆ ಹಲವರಿದ್ದರು, ಎಸ್.ಐ. ನೇಕಾರ ವಂದಿಸಿದರು.

ಕುಸ್ತಿಯಲ್ಲಿ ರೋಷನ್ ಮಾಸೂರ ಪ್ರಥಮ: ಉಣಕಲ್ಲ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ ಅಂಗವಾಗಿ ಕಳೆದ ಮೂರು ದಿನಗ‍ಳಿಂದ ಜರುಗಿದ ರಾಜ್ಯ ಮಟ್ಟದ ಭಾರಿ ಬಯಲು ಜಂಗೀ ಕಾಟಾ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ರೋಷನ್ ಮಾಸೂರ ಪ್ರಥಮ ಸ್ಥಾನ ಪಡೆಯುವ ಮೂಲಕ ₹15,001 ನಗದು ಹಾಗೂ ಕಪ್‌ ತಮ್ಮದಾಗಿಸಿಕೊಂಡರು. ಸದಾನಂದ ಉಣಕಲ್ ಹಾಗೂ ಹರ್ಷದ್ ನರೇಂದ್ರ ಕುಸ್ತಿಯಾಟ ಸಮ ಮಾಡಿ ಇಬ್ಬರಿಗೂ ₹5001 ನಗದು ಹಂಚಲಾಯಿತು. ತೃತೀಯ ಸ್ಥಾನ ಪಡೆದ ಪ್ರಥಮ ಕರಡಿಕೊಪ್ಪಗೆ ₹7501, ಚತುರ್ಥ ಸ್ಥಾನ ಪಡೆದ ಧ್ರುವ ಕೋಟಿಗೆ ₹5001 ನಗದು ಹಾಗೂ ಕಪ್‌ ನೀಡಿ ಸನ್ಮಾನಿಸಲಾಯಿತು.