ತಾಂತ್ರಿಕತೆ ಅಳವಡಿಸಿಕೊಂಡು ಪ್ರಗತಿ ಕಾಣಿರಿ

| Published : Aug 09 2025, 12:00 AM IST

ಸಾರಾಂಶ

ರಾಜ್ಯದಲ್ಲಿ ರೇಷ್ಮೆ ಲಾಭದಾಯಕ ಪ್ರಮುಖ ಬೆಳೆಯಾಗಿ, ಅನೇಕ ವರ್ಷಗಳಿಂದ ರೈತರ ಜೀವನಾಡಿ ಬೆಳೆಯಾಗಿದೆ. ರೈತರು ರೇಷ್ಮೆ ಬೆಳೆಗೆ ತಂತ್ರಜ್ಞಾನವನ್ನು ಜೋಡಿಸಿದರೆ ಮತ್ತಷ್ಟು ಲಾಭ ಪಡೆಯುವ ಮೂಲಕ ಅರ್ಥಿಕ ಪ್ರಗತಿ ಕಾಣಲು ಸಾಧ್ಯವಿದೆ ಎಂದು ಜಿಲ್ಲಾ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀನರಸಯ್ಯ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ರಾಜ್ಯದಲ್ಲಿ ರೇಷ್ಮೆ ಲಾಭದಾಯಕ ಪ್ರಮುಖ ಬೆಳೆಯಾಗಿ, ಅನೇಕ ವರ್ಷಗಳಿಂದ ರೈತರ ಜೀವನಾಡಿ ಬೆಳೆಯಾಗಿದೆ. ರೈತರು ರೇಷ್ಮೆ ಬೆಳೆಗೆ ತಂತ್ರಜ್ಞಾನವನ್ನು ಜೋಡಿಸಿದರೆ ಮತ್ತಷ್ಟು ಲಾಭ ಪಡೆಯುವ ಮೂಲಕ ಅರ್ಥಿಕ ಪ್ರಗತಿ ಕಾಣಲು ಸಾಧ್ಯವಿದೆ ಎಂದು ಜಿಲ್ಲಾ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀನರಸಯ್ಯ ಕರೆ ನೀಡಿದರು.ಕೇಂದ್ರ ರೇಷ್ಮೆ ಮಂಡಳಿ ಇಲ್ಲಿನ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ರೇಷ್ಮೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ನನ್ನ ರೇಷ್ಮೆ ನನ್ನ ಹೆಮ್ಮೆ ಎಂಬ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ರೇಷ್ಮೆ ಒಂದು ಲಾಭದಾಯಕ ಬೆಳೆ. ರಾಜ್ಯದಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯುವಲ್ಲಿ ಪಾವಗಡ ತಾಲೂಕು ಮೊದಲ ಸ್ಥಾನವನ್ನು ಪಡೆಯುತ್ತಿದೆ. ಇದು ಅತ್ಯಂತ ಸಂತಸ ತಂದಿದ್ದು, ರೇಷ್ಮೆ ಬೆಳೆಯಲು ರೈತರು ಮುಗಿಬೀಳುತ್ತಿರುವುದು ಶ್ಲಾಘನೀಯ ಎಂದರು.

ಮೈಸೂರಿನ ರೇಷ್ಮೆ ವಿಜ್ಞಾನಿ ಡಾ.ದಯಾನಂದ್ ಮಾತನಾಡಿ, ರೈತರು ಉತ್ತಮ ಹಿಪ್ಪು ನೇರಳೆ ಬೆಳೆಯುವುದರ ಜೊತೆಗೆ ಶ್ರದ್ಧೆಯಿಂದ ಶ್ರಮವಹಿಸಿದರೆ ಉತ್ತಮ ಲಾಭವನ್ನು ಗಳಿಸಬಹುದು. ವಿಶೇಷ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸಿ ಅನುಷ್ಠಾನಗೊಳಿಸಲು ಈ ಕಾರ್ಯಕ್ರಮ ಜಾರಿಯಾಗಿದ್ದು, ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುರಳೀಧರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ರೇಷ್ಮೆ ಬೆಳೆಯನ್ನು ಬೆಳೆಯುತ್ತಾ ಉತ್ತಮ ಲಾಭ ಪಡೆಯುತ್ತಿರುವುದು ಖುಷಿ ತಂದಿದೆ. ಸರ್ಕಾರದ ಯೋಜನೆಯಲ್ಲಿ ರೈತರಿಗೆ ಡ್ರಿಪ್, ರೇಷ್ಮೆ ಹುಳು, ಚಂದ್ರಿಕೆ, ಸ್ಪೈಯರ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುವುದು. ಯೋಜನೆ ಅಡಿ, ಪಾವಗಡ ತಾಲೂಕನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಲಿರುವುದಾಗಿ ಹೇಳಿದರು.ತೋಟಗಾರಿಕಾ ಇಲಾಖೆಯ ಕಸಬಾ ವಿಸ್ತರಣಾಧಿಕಾರಿ ಚಿತ್ರ ಮಾತನಾಡಿ, ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಡ್ರಿಪ್, ಮಿನಿ ಟ್ರ್ಯಾಕ್ಟರ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳುವಂತೆ ರೈತರಿಗೆ ಕರೆ ನೀಡಿದರು. ಇದರ ಜತೆಗೆ, ರೇಷ್ಮೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸೌಲಭ್ಯ, ಯೋಜನೆ ರೈತರಿಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪ ನಿರ್ದೇಶಕ ಮುನಿಸ್ವಾಮಿ ನಾಯ್ಕ್, ವೈ.ಎನ್.ಹೊಸಕೋಟೆ ಹೋಬಳಿಯ ಎಸ್‌ಸಿಒ ಕಾಮಯ್ಯ, ಪಾವಗಡದ ರಮೇಶ್ ರೇಷ್ಮೆ ಬೆಳೆಯ ಲಾಭದಾಯಕ ಹಾಗೂ ಅಧುನಿಕ ತಾಂತ್ರಿಕತೆ ಕುರಿತು ರೈತರಿಗೆ ಮಾಹಿತಿ ನೀಡಿದ್ದು ಗುಬ್ಬಿಯ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುರಳಿಧರ್, ಶಿರಾ ತಾಲೂಕಿನ ಸಹಾಯಕ ನಿರ್ದೇಶಕ ರಂಗನಾಥ ವೈ.ಎನ್. ಹೊಸಕೋಟೆ ರೇಷ್ಮೆ ವಿಜ್ಞಾನಿ ಭಾಸ್ಕರ್ ಸೇರಿ ತಾಲೂಕಿನಾದ್ಯಂತ 60ಕ್ಕೂ ಅಧಿಕ ರೇಷ್ಮೆ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.