ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತ, ವಿದ್ಯಾರ್ಥಿಸ್ನೇಹಿ ಶಿಕ್ಷಣ ಆಗಿದೆ. ನೂತನ ರಾಷ್ಟ್ರೀಯ ಪಠ್ಯಕ್ರಮದ ಅನುಸಾರವಾಗಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ವ್ಯಕ್ತಿತ್ವ ಹೆಚ್ಚಿಸುವ ಪಠ್ಯಕ್ರಮ ಅನುಸರಿಸಲಾಗುತ್ತದೆ.
ಧಾರವಾಡ:
ಶಿಕ್ಷಕರು ತಮ್ಮ ಬೋಧನೆಯಲ್ಲಿ ವಿವಿಧ ತಂತ್ರಜ್ಞಾನ ಆಧಾರಿತ ಬೋಧನಾ ತಂತ್ರ ಅಳವಡಿಸಿಕೊಳ್ಳಬೇಕೆಂದು ರಾಜ್ಯ ಶಿಕ್ಷಣ ನೀತಿ ಆಯೋಗದ ಸದಸ್ಯ ಕಾರ್ಯದರ್ಶಿ ಡಾ. ಭಾಗ್ಯವಾನಾ ಮುದಿಗೌಡರ ಕರೆ ನೀಡಿದರು.ಕರ್ನಾಟಕ ವಿಶ್ವವಿದ್ಯಾಲಯ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ಆಯೋಜಿಸಿದ್ದ ಎಂಟು ದಿನಗಳ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನ ಮತ್ತು ಸಂವೇದನಾತ್ಮಕ ಆನ್‌ಲೈನ್ ತರಬೇತಿಯಲ್ಲಿ ಮಾತನಾಡಿದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತ, ವಿದ್ಯಾರ್ಥಿಸ್ನೇಹಿ ಶಿಕ್ಷಣ ಆಗಿದೆ. ನೂತನ ರಾಷ್ಟ್ರೀಯ ಪಠ್ಯಕ್ರಮದ ಅನುಸಾರವಾಗಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ವ್ಯಕ್ತಿತ್ವ ಹೆಚ್ಚಿಸುವ ಪಠ್ಯಕ್ರಮ ಅನುಸರಿಸಲಾಗುತ್ತದೆ. ಎಲ್ಲ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಸುಹೊಕ್ಕಾಗಿದ್ದು, ಬೋಧಕರು ನವೀನ ತಂತ್ರಜ್ಞಾನ ಮತ್ತು ದೃಶ್ಯ, ಶ್ರಾವ್ಯ ಸಾಧನ ಮಾಧ್ಯಮಗಳ ಮೂಲಕ ಕಲಿಕೆ ಸುಧಾರಿಸಲು ಸಾಧ್ಯ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸ್ವಯಂ ಕಲಿಕೆಗೆ ಹೆಚ್ಚು ಉತ್ತೇಜನ ನೀಡುತ್ತದೆ. ಆದ್ದರಿಂದ ಪ್ರಸ್ತುತ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಸಂಶೋಧನೆ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡುವ ಅಗತ್ಯವಿದ್ದು ಹೊಸ ಮೌಲ್ಯ ಮಾಪನದ ವಿಧಾನದಿಂದ ವಿದ್ಯಾರ್ಥಿ ವ್ಯಕ್ತಿತ್ವದ ಬೆಳವಣಿಗೆ ಅನುಕೂಲವಾಗಲಿದೆ. ಪ್ರಸ್ತುತ ಕಲಿಕೆ ಮತ್ತು ಬೋಧನೆಯಲ್ಲಿ ಎಐ ತಂತ್ರಜ್ಞಾನ ಬಳಕೆ ಸೂಕ್ತವಾಗಿದ್ದು ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದ ಪರಿಕರಗಳಿಂದ ಕಲಿಸುವುದು ಅಗತ್ಯ ಎಂದರು.ಒಟ್ಟು 16 ದೇಶಗಳ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಭಾರತೀಯ ಜ್ಞಾನ ಪದ್ಧತಿ, ಶಿಕ್ಷಣ ವ್ಯವಸ್ಥೆ, ಹೊಸ ಬೋಧನಾ ವಿಧಾನಗಳು ಸೇರಿದಂತೆ ಉಪನ್ಯಾಸ ನೀಡಿದರು. ಕವಿವಿ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ನಿರ್ದೇಶಕ ಡಾ. ಬಿ.ಎಚ್. ನಾಗೂರ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ರಶ್ಮಿ, ಡಾ. ನಿಂಗಪ್ಪ ಹಳ್ಳಿ, ಫರ್ನಾಂಡೀಸ್ ಫ್ರ‍್ಯಾನ್ಸ್‌ಸ್, ಸನೀತಾ ನಾವಳೆ, ಡಾ. ಹುಸೇನ್ ಸಾಬ ನದಾಫ ಇದ್ದರು.