ಸುಖ ಜೀವನಕ್ಕೆ ಬುದ್ದನ ಮಾರ್ಗ ಅಳವಡಿಸಿಕೊಳ್ಳಿ: ಕಾಂಬಳೆ

| Published : May 24 2024, 01:02 AM IST / Updated: May 24 2024, 11:14 AM IST

ಸುಖ ಜೀವನಕ್ಕೆ ಬುದ್ದನ ಮಾರ್ಗ ಅಳವಡಿಸಿಕೊಳ್ಳಿ: ಕಾಂಬಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧನ ಪಂಚಶೀಲ ತತ್ವದ ಜೊತೆಗೆ ಅಷ್ಟಾಂಗ ಮಾರ್ಗಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಮುಖಂಡ ಗಂಗಾಧರ ಕಾಂಬಳೆ ಹೇಳಿದರು.

 ಇಂಡಿ : ಬುದ್ಧನ ಪಂಚಶೀಲ ತತ್ವದ ಜೊತೆಗೆ ಅಷ್ಟಾಂಗ ಮಾರ್ಗಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಂತಿ ಸ್ಥಾಪನೆಗೆ ಬುದ್ದನ ಉಪದೇಶ ಪಾಲಿಸಬೇಕು. ಭಾರತದಲ್ಲಿ ಬುದ್ಧ ಧರ್ಮ ಹುಟ್ಟಿದರೂ ಪ್ರಚಾರ ಇಲ್ಲದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ ಎಂದು ಹಿರಿಯ ಮುಖಂಡ ಗಂಗಾಧರ ಕಾಂಬಳೆ ಅಭಿಪ್ರಾಯ ಪಟ್ಟರು.

ತಾಲೂಕಿನ ಮಾವಿನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸುಖಮಲ್ಲ ಬಾರಾಣೆ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಬುದ್ಧ ಪೂರ್ಣಿಮಾ ನಿಮಿತ್ತ ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುಖಕರ ಜೀವನಕ್ಕೆ ಅಷ್ಟಾಂಗ ಮಾರ್ಗ ಅಳವಡಿಸಿಕೊಳ್ಳಬೇಕು. ಆಸೆಯೇ ದುಃಖಕ್ಕೆ ಮೂಲ ಎಂದು ಅಂದೇ ಹೇಳಿದ್ದಾರೆ. ಅವುಗಳನ್ನು ಪಾಲಿಸೋಣ, ಸರ್ವರಲ್ಲಿ ಪ್ರೀತಿ ಕಾಣೋಣ ಎಂದರು.

ಬುದ್ಧನ ಪಂಚಶೀಲ ತತ್ವದಲ್ಲಿ ನೀಲಿ ಬಣ್ಣ ಸಮಾನತೆ, ವ್ಯಾಪಕತೆ, ಹಳದಿ ಬಣ್ಣ ಪವಿತ್ರತೆ, ಕರುಣೆ ಹಾಗೂ ಕೆಂಪು ಬಣ್ಣ ಕ್ರೀಯಾಶೀಲತೆ ದೃಢ ಸಂಕಲ್ಪ, ಬಿಳಿ ಬಣ್ಣ ಶಾಂತಿ, ಶುದ್ಧತೆ, ಕೇಸರಿ ಬಣ್ಣ ತ್ಯಾಗ, ಸೇವೆ, ಭಕ್ತಿಯ ಪ್ರತೀಕವಾಗಿವೆ. ಸಿಟ್ಟನ್ನು ತಾಳ್ಮೆಯಿಂದ, ದುಷ್ಟತೆಯನ್ನು ಒಳ್ಳೆಯತನದಿಂದ, ಜಿಪುಣತೆಯನ್ನು ದಾನದಿಂದ, ಅಸತ್ಯವನ್ನು ಸತ್ಯದಿಂದ ಜಯಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸಮಾನತೆ, ಪ್ರೀತಿಯಿಂದ ಬಾಳ್ವೆ ನಡೆಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀಮಂತ ಕಾಂಬಳೆ, ಅರ್ಜುನ ದೇವದಾರ, ನಿಂಬಣ್ಣ ನಾಗರಳಿ, ರಾಮಣ್ಣ ಬಾರಣೆ, ಶೆಟ್ಟೆಪ್ಪ ಕಾಂಬಳೆ ಸೇರಿದಂತೆ ಮೊದಲಾದವರು ಹಾಜರಿದ್ದರು.