ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಸಿದ್ಧಾಂತಗಳು ಮತ್ತು ಜನಪರ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತ, ಯುವ ಪೀಳಿಗೆ ಅರಸುರವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಿಜವಾದ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸುರವರ ೧೧೦ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜ ಅರಸುರವರ ಸುದೀರ್ಘ ೮ ವರ್ಷಗಳ ಅಧಿಕಾರ ಅವದಿಯಲ್ಲಿ ಸಮಾಜದಲ್ಲಿ ಹಿಂದುಳಿದವರು, ದಲಿತರು, ಬಡವರು, ರೈತರು, ಕಾರ್ಮಿಕರು ಮೊದಲಾದ ದುರ್ಬಲ ವರ್ಗದವರ ಪರವಾಗಿ ನಿಂತು ಸರ್ವರಿಗೂ ಸಮಪಾಲು ಸಿಗಬೇಕೆಂಬ ಚಿಂತನೆಯಲ್ಲಿ ಸಾಮಾಜಿಕ ನ್ಯಾಯ ನೀಡಿದವರು ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕಿ ಡಾ.ಡಿ.ಎಸ್.ದೀಪಾ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರು ಗ್ರಾಮೀಣ ಭಾಗದ ಬಡ ಕೃಷಿ ಕುಟುಂಬದಿಂದ ಬಂದು ಪದವಿ ಪಡೆದು ಹಿಂದುಳಿದ ವರ್ಗಗಳ ನಾಯಕರಾಗಿ ಬೆಳೆದವರು, ನಂತರ ರಾಜಕೀಯ ಪ್ರವೇಶ ಮಾಡಿ ಕೇವಲ ರಾಜಕಾರಣಿಯಾಗಿರದೆ ಹಿಂದುಳಿದ ವರ್ಗ, ದಲಿತರ ಹಾಗೂ ಬಡವರು ಸೇರಿ ಎಲ್ಲಾ ವರ್ಗಗಳ ಪರಿವರ್ತನೆಯ ಹರಿಕಾರ ಹಾಗೂ ದಾರ್ಶನಿಕರಾಗಿದ್ದರು ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ದೇವರಾಜ ಅರಸುರವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಹೇಗಿದ್ದರು ಎನ್ನುವುದಕ್ಕಿಂತಲೂ ಅವರು ಸಮಾಜದಲ್ಲಿ ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಅವರ ರಾಜಕೀಯ ಬದುಕು ಆದರ್ಶಪ್ರಾಯವಾಗಿ ಕಾಣಿಸುತ್ತದೆ. ಇಂದಿನ ಪ್ರತಿಯೊಬ್ಬ ರಾಜಕಾರಣಿಯೂ ಅವರ ನೀತಿಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ದೇವರಾಜು ಅರಸು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ, ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಅಪೂರ್ವ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನಂತರಾಜು, ಪಪಂ ಮುಖ್ಯಾಧಿಕಾರಿ ಉಮೇಶ್, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಕೃಷಿ ಸಹಾಯಕ ನಿರ್ದೇಶಕ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಮಂಗಳಮ್ಮ, ರವಿಕುಮಾರ್, ಅನಿತಾ, ಲಕ್ಷ್ಮಮ್ಮ, ಸಿದ್ದಗಂಗಪ್ಪ, ಶೃತಿ, ಗಂಗಮ್ಮ ಸೇರಿ ಇತರರು ಉಪಸ್ಥಿತರಿದ್ದರು.