ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಬಸವೇಶ್ವರ ಪುತ್ಥಳಿಗೆ ಬಸವ ಜಯಂತಿ ಅಂಗವಾಗಿ ವೀರಶೈವ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಶಾಸಕ ಎಚ್. ಕೆ. ಸುರೇಶ್ ಪುಷ್ಪನಮನ ಸಲ್ಲಿಸಿದರು.ನಂತರ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ , ಸಮಾನತೆಯ ಹರಿಕಾರ ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಳ್ಳುವ ಮೂಲಕ ಬಸವ ಜಯಂತಿಗೆ ಸಾಕ್ಷಿಯಾಗಬೇಕು. ಈಗಿನ ಸಮಾಜದಲ್ಲಿ ಧರ್ಮಗಳ ನಡುವೆ ಆಶಾಂತಿ ಉಂಟಾಗುತ್ತಿದ್ದು, ಬಸವಣ್ಣನವರು ನೀಡಿದ ದಯೆಯೇ ಧರ್ಮದ ಮೂಲವಯ್ಯ ಎಂಬ ತತ್ವವನ್ನು ಅಳವಡಿಸಿದರೆ ಮಾತ್ರ ನಾಡಿನಲ್ಲಿ ಸಾಮರಸ್ಯವನ್ನು ಕಾಣಲು ಸಾಧ್ಯವಾಗುತ್ತದೆ ತಿಳಿಸಿದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ೧೨ ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಜಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಅಚಾರ-ವಿಚಾರಗಳಿಂದ, ಮೇಲು-ಕೀಳು ಎಂಬ ಭಾವನೆಗಳಿಂದ, ಸ್ತ್ರೀ- ಪುರುಷ ಎಂಬ ಲಿಂಗಬೇಧ, ತಾರತಮ್ಯದಿಂದ, ಶ್ರೀಮಂತ-ಬಡವ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ಧ ಹೋರಾಟ ನಡೆಸಿದ ಬಸವಣ್ಣನವರ ಸಾಧನೆ ಎಂದಿಗೂ ಶ್ಲಾಘನೀಯ ಎಂದರುತಾಲೂಕು ವೀರಶೈವ ಸಂಘದ ಅಧ್ಯಕ್ಷ ಬಿ.ಎಂ.ರವಿಕುಮಾರ್, ವೀರಶೈವ ರುದ್ರಭೂಮಿ ಟ್ರಸ್ಟ್ ಅಧ್ಯಕ್ಷ ಸಿ.ಎಂ.ನಿಂಗರಾಜ್, ಪುಷ್ಪಗಿರಿ ಮಹಾಸಂಸ್ಥಾನ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್.ಲಕ್ಷ್ಮಣ್, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ತ ಗೆಂಡೇಹಳ್ಳಿ ಚೇತನ್ ಹಾಗೂ ಮುಖಂಡರಾದ ಮಹಾದೇವ್, ಉಮೇಶ್, ಚಂದ್ರಶೇಖರ್, ಬಿ.ಎಲ್.ರಾಜೇಗೌಡ, ಮ.ಶಿವಮೂರ್ತಿ, ದಿನೇಶ್, ಪುಟ್ಟಸ್ವಾಮಿ, ಪವರ್ತಯ್ಯ, ಬೆಣ್ಣೂರು ರೇಣುಕುಮಾರ್, ನಾಗೇಶ್, ತೀರ್ಥಂಕರ್,ಎಂ.ಜೆ.ನಿಂಗರಾಜ್ ಇತರರು ಇದ್ದರು.