ಕೊಟ್ಟೂರು: ಸಹಕಾರ ತತ್ವವನ್ನು ಪ್ರತಿ ಹಂತದಲ್ಲಿ ರೂಢಿಸಿಕೊಂಡರೆ ಎಲ್ಲರ ಬದುಕು ನೆಮ್ಮದಿಯಿಂದ ಇರುತ್ತದೆ. ಸ್ವಾವಲಂಬಿತನ ತಂತಾನೇ ವೃದ್ಧಿಗೊಳ್ಳುವುದು ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್ ಹೇಳಿದರು.
ಸೋಮವಾರ ಪಟ್ಟಣದ ಹರಪನಹಳ್ಳಿ ರಸ್ತೆಯ ಪತ್ತಿಕೊಂಡ ಕಾಂಪ್ಲಸ್ ನ ಮೇಲೆ ಬೀರೇಶ್ವರ ಕೋ ಆಫ್ ಸೊಸೈಟಿ ಕೊಟ್ಟೂರಿನ 33ನೇ ಬ್ಯಾಂಕ್ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರ ಸಂಘ ಎಲ್ಲರ ಏಳಿಗೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದು ಇದರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳುವತ್ತ ಮುಂದಾಗಿ ಬದುಕಿನಲ್ಲಿ ಸದಾ ಮೊದಲ ಸಾಲಿನಲ್ಲಿ ಇರುವಂತೆ ಆಗಬೇಕಿದೆ ಎಂದರು.ಸಮಾರಂಭ ಉದ್ಘಾಟಿಸಿದ ಚಾನುಕೋಟಿ ಮಠ ಅಧ್ಯಕ್ಷ ಡಾ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಯಕ್ಸಂಬಾ ಬೀರೇಶ್ವರ ಕೋ ಆಫ್ ಸೊಸೈಟಿ 30 ವರ್ಷಗಳ ಅವಧಿಯಲ್ಲಿ ಮಹತ್ವದ ಸಾಧನೆಗೈದು ವೇಗವಾಗಿ ಬೆಳೆಯುತ್ತಿರುವ ಕೊಟ್ಟೂರು ಪಟ್ಟಣದಲ್ಲಿ ಶಾಖೆ ಆರಂಭಗೊಳ್ಳುತ್ತಿರುವುದು ಇಲ್ಲಿನ ಆರ್ಥಿಕ ವಹಿವಾಟಿನ ಶಕ್ತಿಯನ್ನು ತೋರಿಸುತ್ತದೆ ಎಂದರು.
ಈ ಬೀರೇಶ್ವರ ಬ್ಯಾಂಕ್ ನ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದು ತಮ್ಮ ದುಡುಮೆಯ ಹಣವನ್ನು ಉತ್ತಮ ರೀತಿಯಲ್ಲಿ ಗಳಿಕೆ ಮಾಡಿಕೊಂಡು ಅಭಿವೃದ್ಧಿ ಗೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು .ಬಿಜೆಪಿ ಮುಖಂಡ ಟಿ ಚನ್ನಬಸವನಗೌಡ, ಬಿಜೆಪಿ ಮುಖಂಡ ಎಸ್. ತಿಂದಪ್ಪ, ಆಡಿಟರ್, ಕಟ್ಟಡ ಮಾಲೀಕ ಪತ್ತಿಕೊಂಡ ಶ್ರೀಕಾಂತ್, ಡಾ.ರಾಕೇಶ್ ಮತ್ತಿತರರು ಇದ್ದರು. ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಸುರೇಶ್ ಸ್ವಾಗತಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಶಿವಪುತ್ರ ಡಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕಿನ ವ್ಯವಸ್ಥಾಪಕರಾದ ಸೋಮಶೇಖರ ಹಿರೇಮಠ, ಅಜಿತ್ ಮಾದರ್, ಪದ್ಮಾರಾಜ್ ಉಪ್ಯಾಧ್ಯ ಇದ್ದರು. ವ್ಯವಸ್ಥಾಪಕ ಆನಂದ್ ಪಾಠೋಳಿ ವಂದಿಸಿದರು.