ಚನ್ನವೀರ ಶರಣರ ಚಿಂತನೆಗಳನ್ನು ರೂಢಿಸಿಕೊಳ್ಳಿ: ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು

| Published : May 17 2025, 01:24 AM IST

ಚನ್ನವೀರ ಶರಣರ ಚಿಂತನೆಗಳನ್ನು ರೂಢಿಸಿಕೊಳ್ಳಿ: ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕೊಟ್ಟೂರು ಲ್ಲಿ ಚನ್ನವೀರ ಶರಣರ ಬಳಗದವರು ಆಯೋಜಿಸಿದ್ದ ಶ್ರೀ ಚಿಕ್ಕೇನಕೊಪ್ಪದ ಚನ್ನವೀರ ಶರಣರ 30ನೇ ಸ್ಮರಣೋತ್ಸವ ಮತ್ತು ಉಡಿ ತುಂಬುವ ಕಾರ್ಯಕ್ರಮದಲ್ಲಿ ಕೊಟ್ಟೂರು ಕಟ್ಟೇಮನಿ ಹಿರೇಮಠದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡಿದ್ದರು.

ಕೊಟ್ಟೂರು: ಚಿಕ್ಕೇನಕೊಪ್ಪ ಚನ್ನವೀರ ಶರಣರು ಸುಂದರ ಬದುಕು, ಸೌಹಾರ್ದಗಾಗಿ ನಡೆಸಿದ ಚಿಂತನೆಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕೊಟ್ಟೂರು ಕಟ್ಟೇಮನಿ ಹಿರೇಮಠದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದರು.

ಪಟ್ಟಣದ ಶ್ರೀ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಚನ್ನವೀರ ಶರಣರ ಬಳಗದವರು ಆಯೋಜಿಸಿದ್ದ ಶ್ರೀ ಚಿಕ್ಕೇನಕೊಪ್ಪದ ಚನ್ನವೀರ ಶರಣರ 30ನೇ ಸ್ಮರಣೋತ್ಸವ ಮತ್ತು ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಚಿಕ್ಕೇನಕೊಪ್ಪದ ಶರಣರು ನಾಡಿನ ಅನೇಕ ಕಡೆ ಸಂಚರಿಸಿ ತಮ್ಮದೇ ಚಿಂತನೆಗಳನ್ನು ಜನತೆಗೆ ತಿಳಿಸಿದ್ದಾರೆ. ಅವರ ಚಿಂತನೆಗಳು ಎಲ್ಲರ ಸುಂದರ ಬದುಕಿಗೆ ದಾರಿಯಾಗಿವೆ. ಅವರು ನಮ್ಮಿಂದ ಶಿವೈಕ್ಯರಾಗಿ 30 ವರ್ಷಗಳಾದರೂ ಅವರ ನಮಗಾಗಿ ತಿಳಿಸಿಕೊಟ್ಟ ವಿಚಾರಗಳು ಇಂದು ಮಾತ್ರವಲ್ಲದೇ ಎಂದಿಗೂ ಜೀವಂತವಾಗಿರುತ್ತದೆ ಎಂದರು.

ಹೂವಿನಹಡಗಲಿಯ ಡಾ. ಹಿರಿಯ ಶಾಂತವೀರ ಸ್ವಾಮಿಗಳು ಮತ್ತು ಮಾನಿಹಳ್ಳಿ ಪುರವರ್ಗದ ಡಾ. ಮಳೆಯೋಗೀಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಸೌಹಾರ್ದತೆಯಿಂದ ಬದುಕಬೇಕು ಎಂಬುದು ಚನ್ನವೀರ ಶರಣರ ಚಿಂತನೆಯಾಗಿತ್ತು. ಅದರಂತೆ ನಡೆದುಕೊಂಡಿದ್ದ ಅವರು ನಾಡಿನೆಲ್ಲೆಡೆ ಸಂಚರಿಸುತ್ತಿದಾಗಲೂ ಜನತೆಗೆ ಅದನ್ನೇ ಹೇಳುತ್ತಿದ್ದರು. ಸಮಾಜದಲ್ಲಿ ಅನೇಕರ ಮೇಲೆ ಶರಣರ ಪ್ರಭಾವ ಬೀರಿದೆ. ಇಂದಿಗೂ ಅವರ ಆದರ್ಶಗಳನ್ನು ಅನೇಕರು ರೂಢಿಸಿಕೊಂಡಿದ್ದಾರೆ ಎಂದರು.

ಶರಣರ ಬಳಗದ ಕಾರ್ಯದರ್ಶಿ ದೇವರಮನಿ ಕರಿಯಪ್ಪ ಪ್ರಾಸ್ತಾವಿಕ ಮಾತನಾಡಿ, ಕಳೆದ 30 ವರ್ಷಗಳಿಂದ ಚನ್ನವೀರ ಶರಣರ ಸ್ಮರಣೋತ್ಸವ ಆಯೋಜಿಸುತ್ತಿದ್ದೇವೆ. ಇದರೊಂದಿಗೆ ಪ್ರತಿ ತಿಂಗಳ 6ರಂದು ಶರಣ ಕಾರ್ಯಕ್ರಮ ನಡೆಸುತ್ತಾ ಬರಲಾಗಿದೆ. ಶರಣರಿಂದ ಪ್ರಭಾವಿತರಾದ ಅನೇಕರು ನಮ್ಮಲ್ಲಿದ್ದಾರೆ ಎಂದರು.

ಬಳಗದ ಅಧ್ಯಕ್ಷ ಡಿ. ಗುರುರಾಜ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ಎಸ್. ಕೊಟ್ರೇಶ, ಪ್ರಮುಖರಾದ ಡಿ. ಪಿನಾಕಪಾಣಿ, ಅಕ್ಕಿ ಚಂದ್ರಣ್ಣ, ಆಡಿಟರ್ ವೀರಯ್ಯ, ಹನುಮಂತಪ್ಪ ಇದ್ದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಬಳಗದಿಂದ ಉಡಿ ತುಂಬಲಾಯಿತು.

ಗಾಯಕಿ ಅನುರಾಧಮ್ಮ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಹೊಂಬಾಳೆ ಮಂಜುನಾಥ, ಕೆ. ಕೊಟ್ರೇಶ್ ನಿರ್ವಹಿಸಿದರು.