ಸಾರಾಂಶ
ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನಯುವಜನತೆಯ ಪ್ರತೀಕ, ಸಾಂಸ್ಕೃತಿಕ ರಾಯಬಾರಿಯಾಗಿದ್ದ ಸ್ವಾಮಿ ವಿವೇಕಾನಂದರ ಮೌಲ್ಯಯುತ ಆದರ್ಶಗಳನ್ನು ಯುವಜನತೆ ಜೀವದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಶ್ರೀ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಶ್ರೀ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಯುವ ಜನತೆ ದುರಾಸೆ ಪಡದೆ ಕಷ್ಟಪಟ್ಟು ದುಡಿದು ಬದುಕು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯಾವುದೇ ಅಡ್ಡದಾರಿ ಹಿಡಿಯದೆ ಪ್ರಾಮಾಣಿಕತೆ ಮತ್ತು ಸತತ ಪ್ರಯತ್ನಯೊಂದಿಗೆ ಶ್ರಮಪಟ್ಟು ಗಳಿಸುವಂತೆ ತಿಳಿಸಿದರು.ಯುವಜನತೆಯ ಚಿಂತನೆ ಬದಲಾವಣೆಯಾಗಬೇಕು. ಸಮಯ ವ್ಯರ್ಥ ಮಾಡದೆ ಯಾವುದೇ ಗಾಳಿ ಮಾತಿಗೆ ಕಿವಿಗೊಡದೆ ತಮ್ಮ ನಿಗದಿತ ಗುರಿಮುಟ್ಟುವ ಮೂಲಕ ಯಶಸ್ವಿಗಳಿಸಿ. ಸಮಾಜಕ್ಕೆ ಉತ್ತಮ ಸೇವೆ ನೀಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಹೇಳಿದರು.
ಯುವ ಜನತೆ ತಮ್ಮಲ್ಲಿರುವ ವಿಶೇಷತೆಗಳನ್ನು ಸಮಾಜಕ್ಕೆ ಪರಿಚಯಿಸಿ ಬೇರೆಯವರಿಗೆ ಮಾದರಿಯಾಗುವಂತೆ ಬದುಕಿ. ತಮ್ಮ ಜವಾಬ್ದಾರಿ ಅರಿತು ಮುನ್ನೆಡೆಯಿರಿ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ‘ಕಬ್ಬಿಣದ ತೋಳುಗಳಂತಿರುವ ಯುವಜನರು ನಮ್ಮ ದೇಶದ ಆಸ್ತಿ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ಅದರಂತೆ ನಾಗರೀಕ ಪ್ರಜ್ಞೆ ಬೆಳಸಿಕೊಂಡು ಪ್ರತಿಯೊಬ್ಬರಿಗೂ ಸ್ಪಂದಿಸಿ ಸಾಮರಸ್ಯದೊಂದಿಗೆ ಸ್ವಾಮಿ ವಿವೇಕಾನಂದರ ಆಶಯದಂತೆ ಬದುಕಿ’ ಎಂದು ತಿಳಿಸಿದರು.
೧೮೬೩ ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ತಾವು ಸಂಬೋಧನೆ ಮಾಡಿದ ಸಹೋದರ ಸಹೋದರಿಯರೆ ಎಂಬ ಪದಗಳು ಸಭಾಂಗಣದಲ್ಲಿ ನೆರೆದಿದ್ದವರೆಲ್ಲರನ್ನು ಮಂತ್ರಮುಗ್ಧರಾಗಿ ನಿರಂತರವಾಗಿ ಕರತಾಡನ ಮಾಡಿರುವುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ. ಅದರಂತೆ ಯುವಜನತೆ ಸಮಾಜಕ್ಕೆ ಏನನ್ನು ನೀಡಬೇಕು ಎಂಬುದರ ಬಗ್ಗೆ ಚಿಂತಿಸಬೇಕು ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್, ಎಚ್.ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ಉಪ ಪ್ರಾಂಶುಪಾಲೆ ಡಾ.ಶೈಲಜಾ ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸತ್ಯಭಾಮ ಉದ್ಘಾಟಿಸಿದರು.