ಸಾರಾಂಶ
ಹೂವಿನಹಡಗಲಿ: ತಾಲೂಕಿನ ಕೋಮಾರನಹಳ್ಳಿ ಸಸ್ಯ ವಲಯದಲ್ಲಿ ಸಾಮಾಜಿಕ ಅರಣ್ಯ ವಲಯ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಕೃಷಿ ಅರಣ್ಯದ ಕುರಿತು ಕೌಶಲ್ಯ ಅಭಿವೃದ್ಧಿ ತರಬೇತಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕಿರಣಕುಮಾರ್ ಕಲ್ಲಮ್ಮನವರ್ ಮಾತನಾಡಿ, ರೈತರು ತಮ್ಮ ಜಮೀನುಗಳಲ್ಲಿ ಅರಣ್ಯ ಕೃಷಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಆದಾಯ ಗಳಿಸಲು ಅವಕಾಶವಿದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ಇದರ ಪ್ರಯೋಜನ ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.ತಾಲೂಕಿನ ರಸ್ತೆಗಳ ಇಕ್ಕೆಲಗಳಲ್ಲಿ ಸಾಮಾಜಿಕ ಅರಣ್ಯ ವಲಯದಿಂದ ಸಾಕಷ್ಟು ಹತ್ತಾರು ತಳಿಯ ವಿವಿಧ ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ. ಆದರೆ ರೈತರು ರಸ್ತೆಯಲ್ಲಿ ತ್ಯಾಜ್ಯ ಹಾಕುವ ಜತೆಗೆ ಅದಕ್ಕೆ ಬೆಂಕಿ ಹಚ್ಚುವುದರಿಂದ ಬೆಳೆದು ನಿಂತಿರುವ ಗಿಡ ಮರಗಳು ಸುಟ್ಟು ಹೋಗುತ್ತಿವೆ. ಇದು ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತಿದ್ದಾರೆ. ಆದರಿಂದ ರೈತರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ದಾವಣಗೆರೆಯ ಕಾರ್ಡಿಯಾ ಸಂಸ್ಥೆಯ ಸುದರ್ಶನ್ ಮಾತನಾಡಿ, ರೈತರು ಕೃಷಿ ಅರಣ್ಯ ಹೇಗೆ ಅಳವಡಿಸಿಕೊಳ್ಳಬೇಕು, ಅದಕ್ಕೆ ಸೂಕ್ತವಾದ ಮರಗಳ ಮಾಹಿತಿ ಹಾಗೂ ಕೃಷಿ ಅರಣ್ಯದ ಪ್ರಯೋಜನಗಳ ಕುರಿತು ವಿವರಿಸಿದರು.ಸಂಪನ್ಮೂಲ ವ್ಯಕ್ತಿ ಚಂದ್ರಗೌಡ ಇವರು, ಜೇನು ಕೃಷಿ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ತರಬೇತಿಯಲ್ಲಿ ಸ್ವಸಹಾಯ ಸಂಘಗಳಿಗೆ ಜೇನು ಕೃಷಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿ, ಜೇನುಪೆಟ್ಟಿಗೆ ವಿತರಿಸಲಾಯಿತು.
ನಾಗತಿ ಬಸಾಪುರ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ರೈತರು ಹಾಗೂ ಸ್ವ ಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.ಉಪವಲಯ ಅರಣ್ಯಾಧಿಕಾರಿ ಸಾಗರ್ ಸ್ವಾಗತಿಸಿದರು, ಗಸ್ತು ಅರಣ್ಯ ಪಾಲಕ ವೀರೇಶ್ ನಿರೂಪಿಸಿದರು. ಗಸ್ತು ಅರಣ್ಯ ಪಾಲಕ ಹುಲುಗಪ್ಪ, ಗಿರೀಶ್, ದುಶ್ಯಂತ್ ಗೌಡ, ರಾಜೇಂದ್ರ ಇತರರಿದ್ದರು.