ಇಂದಿನ ಸಮಾಜದಲ್ಲಿ ಕಡೆಗಣಿಸುವ ಮೂಲಕ ವೈಚಾರಿಕವಾಗಿ ಅವರ ಚಿಂತನೆಗಳನ್ನು ಹತ್ಯೆ ಮಾಡಲಾಗುತ್ತಿದೆ
ಗದಗ: ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಪರಿಸರ ಸಂರಕ್ಷಣೆ, ಅಸ್ಪೃಶ್ಯತೆ ನಿರ್ಮೂಲನೆ, ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣ, ನೈತಿಕತೆ, ರಾಜಕೀಯದಲ್ಲಿ ಮೌಲ್ಯಗಳ ಪಾಲನೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಾಂಧೀಜಿಯವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ ತಿಳಿಸಿದರು.
ಸ್ಥಳೀಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 122ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 20ನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳನ್ನು ಆಚರಣೆಗೆ ತಂದ ಪ್ರಮುಖ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧೀಜಿಯವರು ಒಬ್ಬರು.ಗಾಂಧೀಜಿಯವರನ್ನು ದೈಹಿಕವಾಗಿ ಹತ್ಯೆ ಮಾಡಲಾಗಿದ್ದರೂ, ಅವರ ಮೌಲ್ಯಗಳು ಮತ್ತು ವಿಚಾರಗಳನ್ನು ಇಂದಿನ ಸಮಾಜದಲ್ಲಿ ಕಡೆಗಣಿಸುವ ಮೂಲಕ ವೈಚಾರಿಕವಾಗಿ ಅವರ ಚಿಂತನೆಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವವನ್ನು ಆಧಾರವಾಗಿಟ್ಟುಕೊಂಡು ವಿಶ್ವವಿದ್ಯಾಲಯವು ಮುನ್ನಡೆಯುತ್ತಿರುವುದು ಶ್ಲಾಘನೀಯ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಗೆ ವಿಶ್ವವಿದ್ಯಾಲಯವು ಪ್ರಮುಖ ಜ್ಞಾನಕೇಂದ್ರವಾಗಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿ ವಿಶ್ವವಿದ್ಯಾಲಯ ರೂಪುಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ್ ವಿ.ನಾಡಗೌಡರ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ದೇಶಸೇವೆ ಹಾಗೂ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕುಲಸಚಿವ ಪ್ರೊ. ಅಮರೇಶ್ ಯಾತಗಲ್ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರಿಯವರ ಜೀವನಾದರ್ಶಗಳು ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆಯಾಗಬೇಕು. ಶಿಕ್ಷಣದೊಂದಿಗೆ ಮೌಲ್ಯಗಳು, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಹಣಕಾಸು ಅಧಿಕಾರಿ ಪ್ರಶಾಂತ್.ಜೆ.ಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸಬರಮತಿ ಆಶ್ರಮದ ಸಂಚಾಲಕ ಪ್ರಕಾಶ್ ಎಸ್.ಮಾಚೇನಹಳ್ಳಿ ಸ್ವಾಗತಿಸಿದರು. ನಿಂಗಪ್ಪ ಶಿವಬಸಣ್ಣವರ ವಂದಿಸಿದರು.