ಮನುಷ್ಯನು ತನ್ನ ಜೀವನದಲ್ಲಿ ಎದುರಿಸುವ ವಿವಿಧ ಸಂಕಷ್ಟ, ಆಸೆ-ಆಕಾಂಕ್ಷೆಗಳು ಮತ್ತು ಮಾನಸಿಕ ಸಂಘರ್ಷ ಅರ್ಥಮಾಡಿಕೊಂಡು ಅವುಗಳಿಂದ ಹೊರಬರಲು ಪುರಾಣಗಳಲ್ಲಿನ ತತ್ವಗಳು ಪ್ರೇರಣೆ ನೀಡುತ್ತವೆ.

ಕಂಪ್ಲಿ: ಶ್ರೀದೇವಿ ಪುರಾಣವು ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ಮಾನವನ ಬದುಕಿನ ಉನ್ನತಿ, ಆತ್ಮಶುದ್ಧಿ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಮಾರ್ಗದರ್ಶನ ನೀಡುವ ಮಹತ್ವದ ಪುರಾಣವಾಗಿದೆ ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನಮಠದ ಶ್ರೀವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ಆರಂಭಗೊಂಡ ಶ್ರೀದೇವಿ ಲೀಲಾಮೃತ ಮಹಾತ್ಮೆ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಮನುಷ್ಯನು ತನ್ನ ಜೀವನದಲ್ಲಿ ಎದುರಿಸುವ ವಿವಿಧ ಸಂಕಷ್ಟ, ಆಸೆ-ಆಕಾಂಕ್ಷೆಗಳು ಮತ್ತು ಮಾನಸಿಕ ಸಂಘರ್ಷ ಅರ್ಥಮಾಡಿಕೊಂಡು ಅವುಗಳಿಂದ ಹೊರಬರಲು ಪುರಾಣಗಳಲ್ಲಿನ ತತ್ವಗಳು ಪ್ರೇರಣೆ ನೀಡುತ್ತವೆ. ಶ್ರೀದೇವಿ ಪುರಾಣದ ಆಂತರ್ಯ ಹಾಗೂ ಅದರಲ್ಲಿನ ತತ್ವಾದರ್ಶ ಅರಿತುಕೊಂಡು ಅವುಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ನಿಜಾರ್ಥದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಶ್ರೀದೇವಿ ಪುರಾಣ ದೇಹದ ಪುರಾಣವೆಂದು ಪರಿಗಣಿಸಲಾಗುತ್ತದೆ. ಮನುಷ್ಯನಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಜಯಿಸುವ ಮೂಲಕ ಆತ್ಮೋನ್ನತಿ ಸಾಧಿಸಲು ಇದು ಮಾರ್ಗದರ್ಶನ ನೀಡುತ್ತದೆ. ಬಾಹ್ಯ ಆಚರಣೆಗಳ ಜತೆಗೆ ಆಂತರಿಕ ಶುದ್ಧತೆ, ಭಕ್ತಿ, ಶ್ರದ್ಧೆ ಮತ್ತು ಸದಾಚಾರಕ್ಕೂ ಮಹತ್ವ ನೀಡಬೇಕು. ದೇವಿಯ ಉಪಾಸನೆಯಲ್ಲಿ ತೊಡಗುವ ಸಾಧಕನು ತನ್ನಲ್ಲಿರುವ ದುರ್ಗುಣ ತೊರೆದು, ದೈವಿಕ ಗುಣ ಬೆಳೆಸಿಕೊಳ್ಳಬೇಕು. ನಿರಂತರ ಭಕ್ತಿ, ಸಾಧನೆ ಮತ್ತು ಆತ್ಮಾವಲೋಕನದ ಮೂಲಕ ಉಪಾಸಕನು ದೇವಿಯ ಸ್ವರೂಪ ತನ್ನಲ್ಲಿ ಕಂಡುಕೊಳ್ಳುವ ಉನ್ನತ ಸ್ಥಿತಿ ತಲುಪಲು ಸಾಧ್ಯ ಎಂದು ತಿಳಿಸಿದರು.

ಪುರಾಣ ಪ್ರವಚನ ಮನುಷ್ಯನಿಗೆ ಧಾರ್ಮಿಕ ಜ್ಞಾನ ನೀಡುವುದರ ಜತೆಗೆ ಜೀವನದ ಮೌಲ್ಯ ತಿಳಿಸಿಕೊಡುತ್ತವೆ. ಇಂದಿನ ಜೀವನದ ಒತ್ತಡಗಳ ನಡುವೆ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪುರಾಣಗಳಲ್ಲಿ ತಿಳಿಸಿರುವ ಆದರ್ಶ ಜೀವನದಲ್ಲಿ ಅನುಸರಿಸಿದಾಗ ಕುಟುಂಬದಲ್ಲಿ ಸಾಮರಸ್ಯ, ಸಮಾಜದಲ್ಲಿ ಸದ್ಭಾವನೆ ಹಾಗೂ ವ್ಯಕ್ತಿಯ ಬದುಕಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಿಣಿವಾರದ ಹಿರೇಮಠದ ಶಿವಾಚಾರ್ಯ ಸ್ವಾಮೀಜಿ ಶ್ರೀದೇವಿ ಪುರಾಣದ ಪಠಣ ನೆರವೇರಿಸಿದರು. ಕಲಬುರಗಿಯ ನವಲಿ ವೀರೇಶ ಕುಮಾರ್ ತಬಲಾ ಹಾಗೂ ಸಂಗೀತ ಸೇವೆ ಸಲ್ಲಿಸಿದರು.

ಶ್ರೀದೇವಿ ಪುರಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಎಸ್.ಎಸ್.ಎಂ. ಚನ್ನಬಸವರಾಜಸ್ವಾಮಿ, ಪದಾಧಿಕಾರಿ ಎಂ.ಎಸ್. ಶಶಿಧರಶಾಸ್ತ್ರಿ, ವಾಲಿ ಕೊಟ್ರಪ್ಪ, ಕೆ. ಸಣ್ಣ ಗವಿಸಿದ್ಧಪ್ಪ, ಕೆ.ಎಂ. ಸುಧಾಕರಸ್ವಾಮಿ, ಬಾಳೆಕಾಯಿ ಚನ್ನಪ್ಪ, ಸಿಡಿಗಿನಮಳೆ ದೊಡ್ಡ ಬಸವರಾಜ, ಎಚ್. ಅಮರೇಶ, ದಾನಶೆಟ್ಟಿ ಶಿವನಾಗಪ್ಪ, ಎಸ್. ವೀರಭದ್ರಯ್ಯಸ್ವಾಮಿ, ಎಸ್.ಎಂ. ಅಮರೇಶ, ಎಚ್.ಎಂ. ಕುಮಾರಸ್ವಾಮಿ, ಡಾ. ವೆಂಕಟೇಶ್, ಬಿ. ಸುರೇಶಗೌಡ, ಜವುಕಿನ ಶಂಕರ್, ಎಲಿಗಾರ ವೆಂಕಟರೆಡ್ಡಿ, ಪುಟ್ಟಿ ಬಸವನಗೌಡ, ಸಾಮಿಲ್ ಶೇಖಪ್ಪ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.