ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ದತ್ತು ಪಡೆಯುವುದು ಎಂದರೆ ಮಗುವಿಗೆ ಶಾಶ್ವತವಾಗಿ ಕುಟುಂಬ ವಾತಾವರಣ ಕಲ್ಪಿಸುವುದಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಅನಾಥ ಮಗುವಿನ ಮಾಹಿತಿ ಇದ್ದರೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯೊಂದಿಗೆ ಸಹಕರಿಸಿ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಡಾ. ಪ್ರದೀಪ್ ಕುಮಾರ್ ತಿಳಿಸಿದರು.ಗುರುವಾರ ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ತಾಲೂಕಿನ ಸರ್ಕಾರಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ದತ್ತು ಮಾಸಾಚರಣೆ ಜಾಥಾ ಸಪ್ತಾಹಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಹಾಗೂ ರಾಜ್ಯ ದತ್ತು ಸಂಪನ್ಮೂಲ ಪ್ರಾಧಿಕಾರ ವತಿಯಿಂದ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ದತ್ತು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದ ಅವರು, ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅಂತರಾಷ್ಟೀಯ ದತ್ತು ಮಾಸವಾಗಿ ಆಚರಿಸಲಾಗುತ್ತಿದೆ. ೦-6 ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಲಾಗುತ್ತಿದೆ ಎಂದರು.ಸೊರಬ ಠಾಣಾ ಪಿಎಸ್‌ಐ ರಾಜಶೇಖರ ಮಾತನಾಡಿ, ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಮಗುವನ್ನು ಬಿಸಾಡಿ ಹಿಂಸಿಸಬೇಡಿ, ಇಂತಹ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ಮಮತೆಯ ತೊಟ್ಟಿಲಿನಲ್ಲಿ ಇಡಬಹುದು ಹಾಗೂ ಮಕ್ಕಳನ್ನು ದತ್ತು ಪಡೆಯಲು ದಂಪತಿಗಳಿಗೆ ಕನಿಷ್ಠ 25 ವರ್ಷಗಳಾಗಿರಬೇಕು ಎಂದರು.
ಕನಿಷ್ಠ ಎರಡು ವರ್ಷ ವೈವಾಹಿಕ ಜೀವನ ನಡಿಸಿರಬೇಕು. ಅನಧಿಕೃತವಾಗಿ/ಕಾನೂನು ಬಾಹಿರವಾಗಿ ಮಕ್ಕಳನ್ನು ಮಾರಾಟ ಮಾಡುವರಿಗೆ/ಕೊಳ್ಳುವವರಿಗೂ ಬಾಲನ್ಯಾಯ ಕಾಯಿದೆ ಪ್ರಕಾರ 5 ವರ್ಷ ಕಠಿಣ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲಾಗುತ್ತಿದೆ ಎಂದು ಕಾಯಿದೆಯ ಕುರಿತು ಮಾಹಿತಿ ನೀಡಿದರು.ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ತಾಲೂಕು ಕಚೇರಿ ವರೆಗೆ ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ವತಿಯಿಂದ ದತ್ತು ಮಾಸಾಚರಣೆ ಜಾಥಾ ನಡೆಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಶಿರಸ್ತೇದಾರ್ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತ್ರಾವತಿ, ನೂತನ, ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಅಶೋಕ್ ಸೇರಿದಂತೆ ಪುರಸಭೆ, ರಕ್ಷಣಾ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.