ಸಾರಾಂಶ
ಗದಗ: ರಾಜ್ಯ ಸರ್ಕಾರ ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿದ್ದು, ಅದರ ಭಾಗವಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ 4 ಗ್ರಾಮಗಳನ್ನು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವತಿಯಿಂದ ದತ್ತು ಪಡೆದು ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಸಿ.ಇ.ಎಸ್ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ, ನ್ಯಾಯವಾದಿ ಎಸ್.ಕೆ. ಪಾಟೀಲ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರೆಗೆ ಗ್ರಾಮಗಳಲ್ಲಿ ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 35 ಲಕ್ಷ ಪ್ರಕರಣ ಚಾಲ್ತಿಯಲ್ಲಿವೆ. ರಾಜೀ ಸಂಧಾನದ ಮೂಲಕ ಹೆಚ್ಚು ಹೆಚ್ಚು ಪ್ರಕರಣಗಳು ಇತ್ಯರ್ಥವಾದರೆ ಸಮಾಜದಲ್ಲಿ ಸೌಹಾರ್ದತೆ ನಿರ್ಮಾಣವಾಗಿ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.ಈಗಾಗಲೇ ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಪ್ರಾಧಿಕಾರಗಳು ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗುತ್ತಿದೆ.ಅದಕ್ಕೆ ಪೂರಕವಾಗಿ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ ನ್ಯಾಯಾಲಯಗಳ ಮೂಲಕವೇ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮಾನವ ಹಕ್ಕು, ನ್ಯಾಯ ದೊರಕಿಸಬೇಕು, ಸೌಹಾರ್ದ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ, ಶ್ಯಾಬಳ, ಸಂಕದಾಳ, ಕೊಂಡಿಕೊಪ್ಪ ಗ್ರಾಮಗಳನ್ನು ದತ್ತು ಪಡೆದು ವ್ಯಾಜ್ಯಮುಕ್ತ ಗ್ರಾಮಗಳನ್ನಾಗಿಸಲು ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ದತ್ತು ಪಡೆದ ನಾಲ್ಕು ಗ್ರಾಮಗಳಲ್ಲಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿ ಮನೆ-ಮನೆಗಳಿಗೆ ಹೋಗಿ ಪ್ರಕರಣಗಳು ಬಾಕಿ ಇರುವ ಮಾಹಿತಿ ಸಂಗ್ರಹಿಸುತ್ತಿದ್ದು, ತಾಲೂಕು ಹಾಗೂ ಜೆಎಂಎಫ್ ಸಿ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ರಾಜೀ ಮಾಡಲು ಎರಡೂ ಕಡೆಗಳಲ್ಲಿನ ನ್ಯಾಯವಾದಿಗಳೊಂದಿಗೆ ಚರ್ಚಿಸಲಾಗುತ್ತಿದೆ.ಕಾನೂನು ಸಚಿವ ಎಚ್.ಕೆ. ಪಾಟೀಲ ಈ ಹಿಂದೆಯೂ ಕಾನೂನು ಸಚಿವರಾಗಿ ಕೆಲಸ ಮಾಡುವ ವೇಳೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ತ್ವರಿತ ನ್ಯಾಯಾಲಯ (ಫಾಸ್ಟ್ ಕೋರ್ಟ್) ಆರಂಭಿಸಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಹಕಾರಿಯಾಗಿತ್ತು. ಅದೇ ಮಾದರಿಯಲ್ಲಿ ಸಚಿವ ಎಚ್.ಕೆ. ಪಾಟೀಲ ವ್ಯಾಜ್ಯಗಳಿರುವ ಗ್ರಾಮೀಣ ಭಾಗದ ಜನರು ತಾಲೂಕು, ಜಿಲ್ಲೆಗೆ ಅಲೆದಾಡುವುದನ್ನು ತಪ್ಪಿಸಲು, ನ್ಯಾಯ ಒದಗಿಸುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು, ನ್ಯಾಯ ವ್ಯವಸ್ಥೆ ಗ್ರಾಮ ಮಟ್ಟದ ಜನರ ಮನೆಯ ಬಾಗಿಲಿಗೆ ಕೊಂಡೊಯ್ಯುವುದು ಹಾಗೂ ಯಾವುದೇ ವ್ಯಕ್ತಿ ಸಾಮಾಜಿಕ, ಆರ್ಥಿಕ ಹಾಗೂ ಬಲಹೀನತೆ ಕಾರಣದಿಂದ ನ್ಯಾಯ ಪಡೆಯಲು ವಂಚಿತನಾಗಬಾರದು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಮೂಲಿಮನಿ, ಕಾನೂನು ಮಹಾವಿದ್ಯಾಲಯದ ಉಪಾಧ್ಯಕ್ಷ ಎಸ್.ಕೆ.ನದಾಫ್, ಪ್ರಾಚಾರ್ಯೆ ಪಲ್ಲವಿ ಬುಯ್ಯಾರ್, ಕಾನೂನು ಅರಿವು-ನೆರವು ಮತ್ತು ಮಾನವ ಹಕ್ಕುಗಳ ಘಟಕದ ಸಂಯೋಜಕ ನಾಜೀಮಾ ಮುಲ್ಲಾ ಸೇರಿದಂತೆ ಅನೇಕರು ಹಾಜರಿದ್ದರು.