ರಬಕವಿ ನಗರದದಲ್ಲಿ ಆಯೋಜಿಸಿದ್ದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭಕ್ಕೆ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಹಕಾರ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಗೆ ಗಣಕೀಕರಣ, ಮಾಹಿತಿ ತಂತ್ರಜ್ಞಾನ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಗಳು ಅತ್ಯಂತ ಪೂರಕವಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರ ಸಂಸ್ಥೆಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಮ್ಮ ಕಾರ್ಯವೈಖರಿಯಲ್ಲಿ ಪಾರದರ್ಶಕತೆ, ವೇಗ ಮತ್ತು ದಕ್ಷತೆ ಹೆಚ್ಚಿಸಿಕೊಳ್ಳಬೇಕು ಎಂದು ಜಮಖಂಡಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಡಾ. ಮಲ್ಲಪ್ಪ ರಾಹುತನ್ನವರ ಹೇಳಿದರು.ರಬಕವಿ ನಗರದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ರಬಕವಿ-ಬನಹಟ್ಟಿ ತಾಲೂಕು ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ನಿಮಿತ್ತ ಗಣಕೀಕರಣ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಪ್ರಕ್ರಿಯೆಗಳು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಪೂರಕ ಎಂಬ ವಿಷಯಾಧಾರಿತ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಜಮಖಂಡಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮುಖ್ಯಸ್ಥ ಎಚ್. ಕೆ. ದೊಡಸಿನ್ನವರ ಮಾತನಾಡಿ, ಸಹಕಾರ ಕ್ಷೇತ್ರ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಂಸ್ಥೆಗಳು ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಸಹಕಾರದ ಮೂಲ ಆಶಯಗಳನ್ನು ಉಳಿಸಿಕೊಂಡು ಆಧುನಿಕ ವ್ಯವಸ್ಥೆಗಳೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ರಬಕವಿ ನಗರದ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಎಲ್ಲ ಪಿಕೆಪಿಎಸ್ ಸಹಕಾರ ಸಂಘಗಳು ಪ್ರತಿಶತ ಗಣಕಿಕೃತವಾದ ಸುದ್ದಿ ತಿಳಿದು ಸಂತಸವಾಗಿದೆ ಎಂದರು.ಸಹಕಾರ ಸಂಘಗಳ ಲೆಕ್ಕಪರಿಶೋಧಕ ಎಸ್. ಎಸ್. ಪತ್ತಾರ ಮಾತನಾಡಿದರು.
ನಗರದ ಹಿರಿಯರಾದ ರಾಜೇಂದ್ರ ಮಾಂಡವಕರ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಬೀಳಗಿ, ಮಲ್ಲಿಕಾರ್ಜುನ ಹುಂಡೆಕಾರ, ಸುರೇಶ ಅಬಕಾರ, ರಾಜು ಲೆಂಡಿ, ರಾಮಗೊಂಡ ಮಿರ್ಜಿ, ಸುರೇಶ ಹಾದಿಮನಿ, ವಿಜಯಲಕ್ಷ್ಮೀ ಪಾಟೀಲ, ಅಶೋಕ ಗೊಬ್ಬಾಣಿ, ಸುಭಾಷ ಗೊಬ್ಬಾಣಿ, ಪಿ.ಎಸ್. ಸದಲಗಿ, ಎಸ್.ಆರ್.ನ್ಯಾಮಗೌಡ, ಜೆ. ಜಿ ಸವದಿ, ಸುರೇಶ ಗಾತಾಡಿ ರಾಜಕೀಯ ಮುತ್ಸದ್ದಿಗಳು, ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸಹಕಾರ ಕ್ಷೇತ್ರದ ಧುರೀಣರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಭು ಉಮದಿ ಸ್ವಾಗತಿಸಿದರು. ಕೃಷ್ಣಾ ಯರಕದ ಮತ್ತು ರವೀಂದ್ರ ಅಷ್ಟಗಿ ನಿರೂಪಿಸಿದರು.