ಮೋಸಕ್ಕೊಳಗಾದ ವ್ಯಕ್ತಿಯಿಂದ ಮಾರಾಟಗಾರರಿಗೆ ತರಾಟೆ । ಡಾಲ್ಡ, ಪಾಮೋಲಿನ್ ಎಣ್ಣೆ, ಅನ್ನ, ಮೈದಾ ಹಿಟ್ಟು ಕಲಬೆರೆಕೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಸುಭಾಷ್ ವೃತ್ತದಲ್ಲಿ ರೈತ ಮಹಿಳೆಯರ ಗುಂಪಿನಲ್ಲಿ ಸೇರಿಕೊಂಡು ಕಲಬೆರಕೆ ಬೆಣ್ಣೆ ಮಾರುವ ವ್ಯಕ್ತಿಯಿಂದ ವಂಚನೆಗೆ ಒಳಗಾಗಿದ್ದ ಗ್ರಾಹಕರೊಬ್ಬರು ಮಾರಾಟಗಾರನ ವಿರುದ್ಧ ಗರಂ ಆದ ಘಟನೆ ನಡೆಯಿತು.ಇರ್ವರ ಜಗಳ ಅತಿರೇಕಕ್ಕೆ ಹೋದಾಗ ಇತರರು ಜಗಳ ಬಿಡಿಸಿದರು. ಜಗಳ ಪ್ರಾರಂಭ ಆಗುತ್ತಿದ್ದಂತೆ ೨೦ ಕ್ಕೂ ಹೆಚ್ಚು ಕಲಬೆರಕೆ ಬೆಣ್ಣೆ ಮಾರುವ ಮಹಿಳೆಯರು ಹಾಗೂ ಪುರುಷರು ಅಲ್ಲಿಂದ ಕಲ್ಕಿತ್ತರು. ಪಟ್ಟಣದಲ್ಲಿ ಪ್ರತಿ ಸೋಮವಾರ ಇಲ್ಲಿನ ಸುಭಾಷ್ ವೃತ್ತ, ಜಗಜೀವನ್‌ರಾಂ ವೃತ್ತ ಹಾಗೂ ಕುರುಹಿನಶೆಟ್ಟಿ ಕಲ್ಯಾಣ ಮಂಟಪದ ತಿರುವಿನಲ್ಲಿ ಬೆಣ್ಣೆ ಮಾರಾಟ ಜೋರಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಬೆಣ್ಣೆ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಡಾಲ್ಡ, ಪಾಮೋಲಿನ್ ಎಣ್ಣೆ, ಅನ್ನ, ಮೈದಾ ಹಿಟ್ಟು, ಗೆಣಸಿನ ಹಿಟ್ಟು ಬೆರೆಸಿ, ಕಲಬೆರೆಕೆ ಬೆಣ್ಣೆ ಮಾರಾಟ ಮಾಡಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ದೂರುಗಳಿಗೆ ಈ ಜಗಳ ಪುಷ್ಠಿ ನೀಡಿದೆ. ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಕಲಬೆರಕೆ ಬೆಣ್ಣೆ ಮಾರುವವರ ವಿರುದ್ಧ ಕಾನೂನು ಅಡಿಯಲ್ಲಿ ಅಗತ್ಯ ಕ್ರಮಕೈಗೊಳ್ಳದಿದ್ದರೆ ಹೊಳೆನರಸೀಪುರದ ಬೆಣ್ಣೆ ಕೆಲವೇ ದಿನಗಳಲ್ಲಿ ಪ್ರಾಮುಖ್ಯತೆ ಮತ್ತು ಪ್ರಖ್ಯಾತಿಯನ್ನು ಕಳೆದುಕೊಳ್ಳುತ್ತದೆ.ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ ಹಾಗೂ ಬೆಣ್ಣೆ ವ್ಯಾಪಾರವನ್ನು ಮಾಡುತ್ತಾರೆ. ಜತೆಗೆ ಇಲ್ಲಿನ ಬೆಣ್ಣೆಗೆ ಎಲ್ಲಿಲ್ಲದ ಬೇಡಿಕೆ ಇದೆ. ರೈತರ ಬೆಣ್ಣೆ ತಯಾರಿಕೆಯಲ್ಲಿ ತೋರುವ ವಿಶೇಷ ಕಾಳಜಿಯಿಂದಾಗಿ ಅತ್ಯುತ್ತಮ ರುಚಿಯ, ಸುವಾಸನೆಯ ತುಪ್ಪದಿಂದಾಗಿ ಇಲ್ಲಿಯ ಬೆಣ್ಣೆಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಯ ದುರುಪಯೋಗವನ್ನು ಪಡೆಯಲು ಹಿಂದೆ ಐದಾರು ಮಹಿಳೆಯರು ಒಂದಿಬ್ಬರು ಪುರುಷರು ಕಲಬೆರಕೆ ಬೆಣ್ಣೆ ಮಾರಾಟ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ೧೫ ರಿಂದ ೨೦ ಮಹಿಳೆಯರು, ಐದಾರು ಪುರುಷರು ರೈತ ಮಹಿಳೆಯರ ಮಧ್ಯದಲ್ಲೇ ನಿಂತು ಕಳಪೆ ಬೆಣ್ಣೆ ಮಾರಾಟ ಮಾಡುತ್ತಿತ್ತು,ಒಂದು ಸೇರು ಎಂದರೆ ೩೩೦ ಗ್ರಾಂ ಇರುತ್ತದೆ, ಕೆಲವರ ಬೆಣ್ಣೆ ೧ ಸೇರಿಗೆ ೪೦೦ ಗ್ರಾಂವರೆಗೂ ಬರುತ್ತದೆ. ಕೆಲವರದ್ದು ೩೦೦ ರಿಂದ ೩೩೦ ಗ್ರಾಂ ಬರುತ್ತದೆ. ಬೆಣ್ಣೆಯ ಉಂಡೆಯ ದಪ್ಪ ಹಾಗೂ ಉಂಡೆ ಮಾಡಿರುವ ರೀತಿಯಿಂದ ಬೆಣ್ಣೆ ಎಷ್ಟಿರಬಹುದು ಎಂದು ಅಂದಾಜಿಸಿ ಬೆಣ್ಣೆ ಖರೀದಿಸುತ್ತಾರೆ. ಒಂದು ಸೇರು ಬೆಣ್ಣೆ ೨೫೦ ರು.ನಿಂದ ರಿಂದ ೩೦೦ ರು.ರವರೆಗೆ ಮಾರಾಟ ಆಗುತ್ತದೆ. ಹಸುವಿನ ಬೆಣ್ಣೆ ಬೆಲೆ ಯಾವಾಗಲೂ ಒಂದು ಸೇರಿಗೆ ೨೦ ರು.ನಿಂದ ರಿಂದ ೩೦ ರು. ಹೆಚ್ಚಿರುತ್ತದೆ. --------