ಮಾಗಡಿ: ಪಶು ಆಹಾರ ಪೂರೈಕೆಯಲ್ಲಿ ಕಲ್ಲು - ಮಣ್ಣು ಮಿಶ್ರಣದಿಂದ ಜಾನುವಾರುಗಳ ಆರೋಗ್ಯ ಹದಗೆಡಲಿದೆ ಎಂದು ಹೈನುಗಾರರು ಆತಂದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಾಗಡಿ: ಪಶು ಆಹಾರ ಪೂರೈಕೆಯಲ್ಲಿ ಕಲ್ಲು - ಮಣ್ಣು ಮಿಶ್ರಣದಿಂದ ಜಾನುವಾರುಗಳ ಆರೋಗ್ಯ ಹದಗೆಡಲಿದೆ ಎಂದು ಹೈನುಗಾರರು ಆತಂದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಒಣ ಆಹಾರವನ್ನೇ ಹಸುಗಳಿಗೆ ನೀಡುತ್ತಿದ್ದ ರೈತರು, ಇತ್ತೀಚೆಗೆ ಹಸುಗಳಲ್ಲಿ ನಿಶ್ಯಕ್ತಿ ಹಾಗೂ ಅಜೀರ್ಣ ಸಮಸ್ಯೆಯಿಂದ ಆಹಾರವನ್ನು ನೀರಿನಲ್ಲಿ ನೆನೆಸಿ ಕಲಸಿ ಕೊಡುತ್ತಿದ್ದಾರೆ. ಈ ವೇಳೆ ಪಾತ್ರೆ ತಳಭಾಗದಲ್ಲಿ ಮುಕ್ಕಾಲು ಕೆಜಿ ಯಿಂದ ಒಂದೂವರೆ ಕೆಜಿವರೆಗೆ ಬಿಳಿ ಕಲ್ಲು ಹಾಗೂ ಮಣ್ಣಿನ ಕಣಗಳು ಶೇಖರಣೆಯಾಗಿರುವುದು ಬೆಳಕಿಗೆ ಬಂದಿದೆ. 6 ಕೆಜಿ ಆಹಾರದಲ್ಲಿ ಇಷ್ಟು ಪ್ರಮಾಣದ ಕಲ್ಲು-ಮಣ್ಣು ಸಿಗುತ್ತಿರುವುದು ರೈತರನ್ನು ಬೆಚ್ಚಿಬೀಳಿಸಿದೆ.ಲಕ್ಷಾಂತರ ರುಪಾಯಿ ಸಾಲ-ಸೋಲ ಮಾಡಿ ಹಸುಗಳನ್ನು ಸಾಕಿ ಬದುಕು ಕಟ್ಟಿಕೊಂಡಿರುವ ರೈತರಿಗೆ ಈ ಕಳಪೆ ಆಹಾರ ದೊಡ್ಡ ಪೆಟ್ಟು ನೀಡಿದೆ. ದಿನವೊಂದಕ್ಕೆ ಅರ್ಧ ಕೆಜಿಗೂ ಹೆಚ್ಚು ಕಲ್ಲು ಹಸುವಿನ ಹೊಟ್ಟೆ ಸೇರುತ್ತಿರುವುದರಿಂದ ಜೀರ್ಣಾಂಗವ್ಯೂಹ ಹಾಳಾಗುತ್ತಿದೆ. ಇದರಿಂದ 7-8 ಲೀಟರ್ ಹಾಲು ಕೊಡುತ್ತಿದ್ದ ಹಸುಗಳು ದಿಢೀರನೆ 2-3 ಲೀಟರ್ಗೆ ಇಳಿದಿದ್ದು, ಹಸುಗಳು ಕೃಶವಾಗಿ ಸಾವನ್ನಪ್ಪುವ ಭೀತಿ ಎದುರಾಗಿದೆ.
ಸುಮಾರು 25 ವರ್ಷಗಳಿಂದ ರೈತರ ಅಚಲ ನಂಬಿಕೆಗೆ ಪಾತ್ರವಾಗಿದ್ದ ಬಮುಲ್ ಗುಣಮಟ್ಟದ ಪಶು ಆಹಾರಕ್ಕೆ ಇತ್ತೀಚಿನ ತಿಂಗಳಲ್ಲಿ ಕಳಪೆ ಸರಬರಾಜುದಾರರ ಹಾವಳಿ ತಟ್ಟಿದೆ ಎಂದು ರೈತರು ಆರೋಪಿಸಿ, ಕಲ್ಲು ಹೊಡೆಯುವ ಟೆಂಡರ್ ಪಡೆದವರಂತೆ ವರ್ತಿಸುತ್ತಿರುವ ಗುತ್ತಿಗೆದಾರರು ಹಾಗೂ ಇದಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಗ್ರಾಮಸ್ಥರು ಒಕ್ಕೊರಲ ಆಗ್ರಹ ಮಾಡಿದ್ದಾರೆ.ತಾಲೂಕಿನ ಶಿವನಸಂದ್ರ, ಹುಚ್ಚಹನುಮೇಗೌಡರಪಾಳ್ಯ, ಬ್ಯಾಡರಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿರುವ ಹಾಲಿನ ಡೇರಿಗಳಿಗೆ ಬಮುಲ್ ಪಶು ಆಹಾರ ಪೂರೈಸುತ್ತಿದೆ. ಡೇರಿ ಕಾರ್ಯದರ್ಶಿ ಹಾಗೂ ಶಿಬಿರದ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.
ಈ ವೇಳೆ ರೈತರಾದ ಗಂಗಾಧರ್, ಗಂಗರಾಮಯ್ಯ, ರಾಮಚಂದ್ರಯ್ಯ, ಪುಟ್ಟಸ್ವಾಮಯ್ಯ, ರಂಗೇಗೌಡ, ಗಂಗಣ್ಣ, ವೆಂಕಟೇಶ್, ಶಾರದಮ್ಮ, ಅಂಬಿಕಾ, ಹನುಮಂತಯ್ಯ, ರಾಮಚಂದ್ರಯ್ಯ ಉಪಸ್ಥಿತರಿದ್ದರು.(ಫೋಟೊ ಕ್ಯಾಪ್ಷನ್)
ಬಮೂಲ್ ವತಿಯಿಂದ ಪೂರೈಸಿರುವ ಪಶು ಆಹಾರದಲ್ಲಿ ಮರಳು ಕಲಬೆರಕೆ ತೋರುತ್ತಿರುವ ರೈತರು.