ಅದ್ವೈತ ರಥಕ್ಕೆ ಪೆರಾಜೆ ಮಾಣಿ ಮಠದಲ್ಲಿ ಸ್ವಾಗತ

| Published : Mar 14 2025, 12:35 AM IST

ಸಾರಾಂಶ

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪದಂತೆ ಶಂಕರ ಪಂಚಮಿ ಪ್ರಯುಕ್ತ ಸಿದ್ದಾಪುರದ ಭಾನ್ಕುಳಿ ಮಠದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಪ್ರಯಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಅದ್ವೈತ ರಥ ಬುಧವಾರ ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರ ಮಠಕ್ಕೆ ಆಗಮಿಸಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪದಂತೆ ಶಂಕರ ಪಂಚಮಿ ಪ್ರಯುಕ್ತ ಸಿದ್ದಾಪುರದ ಭಾನ್ಕುಳಿ ಮಠದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಪ್ರಯಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಅದ್ವೈತ ರಥ ಬುಧವಾರ ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರ ಮಠಕ್ಕೆ ಆಗಮಿಸಿತು.

ಮಠದ ವತಿಯಿಂದ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ನೀಡಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಸ್ವಾಗತ ನೀಡಿದ ಬಳಿಕ ಕಬಕ ,ಮಿತ್ತೂರು, ಮಾಣಿ ವಲಯ ಪ್ರವೇಶಿಸಿತು.

ಮಾಣಿ ಮಠದಲ್ಲಿ ಏರ್ಪಡಿಸಲಾದ ಶ್ರೀ ಶಂಕರಾಚಾರ್ಯರ ಅದ್ವೈತ ತತ್ವ ಚಿಂತನಾ ಸಭೆಯಲ್ಲಿ ಮಿತ್ತೂರು ವೇ.ಮೂ. ಶ್ರೀನಿವಾಸ ಭಟ್ ಅವರು ಶ್ರೀ ಶಂಕರಾಚಾರ್ಯರ ಜೀವನ ಹಾಗೂ ಸಾಧನೆಯ ಬಗ್ಗೆ ಪ್ರವಚನ ಮಾಡಿದರು.

ಮಾಣಿ ಮಠದ ಆಡಳಿತ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಜಯಂತಿಯಂದು ಮಾಣಿ ಮಠದಲ್ಲಿ ರಂಗಪೂಜೆ ಪ್ರಾರಂಭಿಸಿ ಬಳಿಕ ಪ್ರತಿ ಶನಿವಾರ ಸಂಜೆ ರಂಗ ಪೂಜೆ ಸೇವೆ ನಡೆಸಲಾಗುವುದು ಎಂದು ತಿಳಿಸಿದರು.ಶೈಲಜಾ ಕೆ ಭಟ್ ಉಪಸ್ಥಿತರಿದ್ದರು. ಉಪ್ಪಿನಂಗಡಿ ಮಹಾ ಮಂಡಲದ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಅದ್ವೈತ ರಥಕ್ಕೆ ಸಮಾಜದ ಸರ್ವ ಬಂಧುಗಳಿಂದಲೂ ವಿಶೇಷ ಸ್ವಾಗತ ಲಭಿಸಿದೆ ಎಂದರು.

ಮೇ ೧ ರಂದು ಸಿದ್ದಾಪುರದ ಭಾನ್ಕುಳಿ ಮಠದಲ್ಲಿ ವಾರ್ಷಿಕೋತ್ಸವ , ೨ ರಂದು ಕೃಷಿಕರ ಸಂಕಷ್ಟ ನಿವಾರಣಾರ್ಥವಾಗಿ ಶ್ರೀ ಪಾದುಕಾ ಪೂಜೆ, ೩ ರಂದು ಧರ್ಮ ಸಭೆ, ೪ ರಂದು ಕಾಮಧೇನು ಹವನ, ಮಾತೃತ್ವ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ವಸಂತರಾಜ ರಾಮರಪಾಲು ವಂದಿಸಿದರು. ಶಿಕ್ಷಕಿ ನಯನಾ ಗಣರಾಜ್ ನಿರೂಪಿಸಿದರು.