ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರ ಏಳ್ಗೆ: ಎಂ.ಡಿ. ಪದ್ಮಾವತಿ

| Published : Aug 28 2024, 12:55 AM IST

ಸಾರಾಂಶ

ನಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯು ಜನರ ಜೀವನ ಸುಧಾರಣೆಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಬಡ, ಮಧ್ಯಮ, ನಿರ್ಗತಿಕರು, ನಿರಾಶ್ರಿತರು, ಕೃಷಿ ಚಟುವಟಿಕೆ, ವೃತ್ತಿಪರ ಶಿಕ್ಷಣ, ಹೈನುಗಾರಿಕೆ, ಸ್ವಯಂ ಉದ್ಯೋಗ ಸೇರಿ ಎಲ್ಲಾ ವಿಭಾಗದಲ್ಲೂ ಉತ್ತಮ ಕಾರ್ಯಕ್ರಮ ರೂಪಿಸಿ ಸಮಾಜಮುಖಿ ಕೆಲಸ ಮಾಡುತ್ತಿದೆ.

ತಿಪಟೂರು: ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಆರ್ಥಿಕ, ಸಾಮಾಜಿಕ, ಆರೋಗ್ಯ, ಸ್ವ ಉದ್ಯೋಗ ಹೀಗೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ ತಿಳಿಸಿದರು.ತಾಲೂಕಿನ ಹೊನ್ನವಳ್ಳಿ ವಲಯದ ಶಿವರಾಮನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಷುಷ್ಪಗಿರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯು ಜನರ ಜೀವನ ಸುಧಾರಣೆಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಬಡ, ಮಧ್ಯಮ, ನಿರ್ಗತಿಕರು, ನಿರಾಶ್ರಿತರು, ಕೃಷಿ ಚಟುವಟಿಕೆ, ವೃತ್ತಿಪರ ಶಿಕ್ಷಣ, ಹೈನುಗಾರಿಕೆ, ಸ್ವಯಂ ಉದ್ಯೋಗ ಸೇರಿ ಎಲ್ಲಾ ವಿಭಾಗದಲ್ಲೂ ಉತ್ತಮ ಕಾರ್ಯಕ್ರಮ ರೂಪಿಸಿ ಸಮಾಜಮುಖಿ ಕೆಲಸ ಮಾಡುತ್ತಿದೆ. ಶ್ರೀಕ್ಷೇತ್ರ ಯೋಜನೆಯು ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೆ, ಹೆಣ್ಣು ಮಕ್ಕಳಲ್ಲಿ ಅತ್ಮಸ್ಥೈರ್ಯ ತುಂಬಿ ಕುಟುಂಬದ ಅಭಿವೃದ್ಧಿಗಾಗಿ ಸ್ವ ಉದ್ಯೋಗ ಕಲ್ಪಿಸಿಕೊಟ್ಟು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಟೈಲರಿಂಗ್, ಕಸೂತಿ, ಗೃಹ ಬಳಕೆ ವಸ್ತುಗಳ ತಯಾರಿಕೆ, ಆಟೋ ರಿಕ್ಷಾ ತರಬೇತಿ ಹೀಗೆ ವಿವಿಧ ಕೌಶಲ್ಯಗಳ ತರಬೇತಿ ನೀಡಲಾಗುತ್ತಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯೆ ಸುಮಾ, ಆರ್ಥಿಕ ಸಾಕ್ಷರತಾ ಕೇಂದ್ರದ ಪಿ. ರೇಖಾ, ಕುಸುಮಾ, ವಲಯ ಮೇಲ್ವಿಚಾರಕ ಪರಶಿವಮೂರ್ತಿ, ಕೃಷಿ ಮೇಲ್ವಿಚಾರಕ ಪ್ರಮೋದ್, ಸೇವಾ ಪ್ರತಿನಿಧಿ ಪ್ರಮೀಳಾ, ವಿಎಲ್‌ಇ ಮಾನಸ, ಹರ್ಷ ಸೇರಿ ಕೇಂದ್ರದ ಎಲ್ಲಾ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. ಕೇಂದ್ರದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸದಸ್ಯರು ಜಾನಪದ ಗೀತೆ, ಭಾವಗೀತೆ, ಭಜನೆ, ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.