ಸಾಹಸ ಕಥೆಗಳನ್ನು ಓದಬೇಕು, ಕಲಿಯಬೇಕು

| Published : Apr 23 2025, 12:32 AM IST

ಸಾರಾಂಶ

ಯಶಸ್ಸು ರಾತ್ರೋರಾತ್ರಿ ಸಿಗುವಂತದಲ್ಲ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಕಠಿಣ ಪರಿಶ್ರಮ, ವೈಫಲ್ಯ, ಸಾಧನೆ, ಹೋರಾಟ ಮತ್ತು ಪರಿಶ್ರಮದ ಕಥೆ ಇರುತ್ತದೆ. ನಾವು ಈ ಕಥೆಗಳನ್ನು ಓದಿದಾಗ ಅವರ ಸಾಧನೆಗಳ ಬಗ್ಗೆ ಮಾತ್ರವಲ್ಲದೇ ಅವರು ಕಲಿತ ಪಾಠಗಳ ಬಗ್ಗೆಯೂ ನಾವು ಕಲಿಯುತ್ತೇವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಯಶಸ್ಸು ರಾತ್ರೋರಾತ್ರಿ ಸಿಗುವಂತದಲ್ಲ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಕಠಿಣ ಪರಿಶ್ರಮ, ವೈಫಲ್ಯ, ಸಾಧನೆ, ಹೋರಾಟ ಮತ್ತು ಪರಿಶ್ರಮದ ಕಥೆ ಇರುತ್ತದೆ. ನಾವು ಈ ಕಥೆಗಳನ್ನು ಓದಿದಾಗ ಅವರ ಸಾಧನೆಗಳ ಬಗ್ಗೆ ಮಾತ್ರವಲ್ಲದೇ ಅವರು ಕಲಿತ ಪಾಠಗಳ ಬಗ್ಗೆಯೂ ನಾವು ಕಲಿಯುತ್ತೇವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಹೇಳಿದರು.

ಬೆಳಗಾವಿ ವಲಯದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಕ್ಯಾಂಪಸ್‌ನಲ್ಲಿ ಸ್ಥಾಪನೆ ಮಾಡಿದ ಇಂಟರ್ನ್‌ಶಿಪ್ ಮತ್ತು ಕೌಶಲ್ಯ ತರಬೇತಿ ಸೌಲಭ್ಯಗಳ ಬಗ್ಗೆ ತಿಳಿಸಿಕೊಡಲು ಅಕಾಡ್ಮಿಯಾ ಕನೆಕ್ಟಸ್ ಒಂದು ದಿನದ ಕ್ಯಾಂಪಸ್ ಎಕ್ಸ್‌ಪೋಸರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಖ್ಯಾತ ಉದ್ಯಮಿಗಳಾದ ಇನ್ಫೋಸಿಸ್ ನಾರಾಯಣ ಮೂರ್ತಿ, ಅಜೀಂ ಪ್ರೇಮ್‌ಜಿ, ಧೀರೂಭಾಯಿ ಅಂಬಾನಿ, ಬಿಲ್ ಗೇಟ್ಸ್, ಎಲಾನ್ ಮಸ್ಕ್ ಅಥವಾ ಸ್ಥಳೀಯ ಮಟ್ಟದ ಉದ್ಯೋಗಿಗಳು ಸಹ ನಮಗೆ ವಿಭಿನ್ನವಾಗಿ ಯೋಚಿಸುವುದನ್ನು ಮತ್ತು ನಾವು ಕಂಡ ಕನಸುಗಳನ್ನು ಎಂದಿಗೂ ಬಿಟ್ಟುಕೊಡದಿರುವುದು ಹೇಗೆ ಎಂಬುವುದನ್ನು ನಮಗೆ ತೋರಿಸುತ್ತಾರೆ. ಈ ಸಾಧಕರು ಚಿನ್ನದ ಚಮಚದೊಂದಿಗೆ ಹುಟ್ಟಿಲ್ಲ, ಅವರೆಲ್ಲರೂ ಈ ಯಶಸ್ಸನ್ನು ಸಾಧಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಆದ್ದರಿಂದ, ಅವರ ಸಾಹಸಗಾಥೆಗಳು ನಮಗೆ ನಮ್ಮ ಜೀವನದಲ್ಲಿ ಹೇಗೆ ಬದುಕಿದರೇ ಯಶಸ್ಸು ಸಾಧ್ಯ ಎಂದು ನಮಗೆ ಕಲಿಸುತ್ತದೆ. ವಿದ್ಯಾರ್ಥಿಗಳಾಗಿ ನೀವು ಇಂತಹ ಸಾಹಸ ಕಥೆಗಳನ್ನು ಓದಬೇಕು ಮತ್ತು ಕಲಿಯಬೇಕು. ಅವು ನಿಮಗೆ ಪ್ರೇರಣೆ ನೀಡುತ್ತವೆ, ಆತ್ಮವಿಶ್ವಾಸವನ್ನು ಬೆಳೆಸುತ್ತವೆ, ನಿಮ್ಮ ಮನಸ್ಸನ್ನು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತವೆ ಎಂದು ಸಲಹೆ ನೀಡಿದರು.ನಾವು ಕಷ್ಟಪಟ್ಟು ಕೆಲಸ ಮಾಡಬೇಕು, ಗಮನಹರಿಸಬೇಕು ಮತ್ತು ಎಂದಿಗೂ ಸೋಲನ್ನು ಒಪ್ಪಿಕೊಳ್ಳಬಾರದವು. ವೈಫಲ್ಯಗಳು ಮತ್ತು ಹಿನ್ನಡೆಗಳು ಇದ್ದೆ ಇರುತ್ತವೆ. ಆದರೆ, ನಾವು ನಮ್ಮ ಕನಸನ್ನು ಜೀವಂತವಾಗಿಟ್ಟುಕೊಂಡರೇ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಜೊತೆಗೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಒಂದು ತಂಡದಲ್ಲಿ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ತಿಳಿಸಿದರು.

ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ವಿಟಿಯು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಕೌಶಲ್ಯ ತರಬೇತಿಯ ಮೂಲಕ ಇಂದಿನ ವೃತ್ತಿಪರ ವಲಯದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ನೀಡಲಾಗುತ್ತಿದೆ. ವಿವಿಧ ಕೈಗಾರಿಕೆಗಳನ್ನು ಕ್ಯಾಂಪಸ್‌ಗೆ ಅವಾಹನಿಸಲಾಗಿದ್ದು, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈಗಾಗಲೇ ಕಲಿಕೆ ಜೊತೆಗೆ ಗಳಿಕೆ ಉದ್ದೇಶವನ್ನು ಇಟ್ಟುಕೊಂಡು ಕ್ಯೂಮ್ಯಾಗ್ನ ತನ್ನ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಜೊತೆಗೆ ಡ್ರೋನ್ ತಂತ್ರಜ್ಞಾನ, ಎಲೆಕ್ಟ್ರಿಕ್ ವೆಹಿಕಲ್, ಇಂಡಸ್ಟ್ರಿಯಲ್ ಆಟೊಮೇಷನ್, ಹೋಮ್ ಆಟೊಮೇಷನ್, ಸೋಲಾರ್ ಆಟೊಮೇಷನ್, ಸಿಎನ್‌ಸಿ ಮಷಿನ ಕಾರ್ಯಾಗಾರ, ಎಐ, ಐಒಟಿ ಮತ್ತು ವಿಎಲ್‌ಎಸ್‌ಐ, ಎಆರ್ ಮತ್ತು ವಿ.ಆರ್‌ ನಲ್ಲಿ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸೆಲೆನ್ಸ್‌ಗಳನ್ನೂ ಸ್ಥಾಪಿಸಲಾಗಿದೆ. ವಿಟಿಯು ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳಿಗಾಗಿ ಈ ಸೌಲಭ್ಯಗಳನ್ನು ಮಾಡಿದ್ದು ಮತ್ತು ಕೌಶಲ್ಯ ತರಬೇತಿ ಇಂಟರ್ನ್‌ಶಿಪ್ ಕಾರ್ಯಕ್ರಮಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ನೀಡಲಾಗುವುದು. ಇಲ್ಲಿ ವಿದ್ಯಾರ್ಥಿಗಳಿಗೆ ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಾಯೋಗಿಕವಾಗಿ ತೊಡಗಿಕೊಳ್ಳುತ್ತಾರೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ನಾವೀನ್ಯ ಮತ್ತು ಸೃಜನಶೀಲ ಕೌಶಲ್ಯಗಳನ್ನು ಗುರುತಿಸಲು ಮತ್ತು ಧನ ಸಹಾಯ ನೀಡಲು ಮತ್ತು ಹೊಸ ಆಲೋಚನೆಗಳಿಗೆ ಮೂರ್ತ ರೂಪವನ್ನು ನೀಡಲು ಒಂದು ಉತ್ತಮ ವೇದಿಕೆಯನ್ನು ನೀಡಲು ಮತ್ತು ತಮ್ಮದೇ ಆದ ಹೊಸ ನವೋದ್ಯಮವನ್ನು ಪ್ರಾರಂಭಿಸಲು ವಿಟಿಯು ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ಇನ್ನೋವೇಶನ್ ಫೌಂಡೇಶನ್ (ವಿಆರ್‌ಐಎಫ್) ಎಂಬ ವಿಭಾಗ-8 ಕಂಪನಿಯನ್ನು ಸ್ಥಾಪಿಸಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕೌಶಲ್ಯ ಆಧಾರಿತ ಔದ್ಯೋಗಿಕ-ಆಧಾರಿತ ಜ್ಞಾನವನ್ನು ಪಡೆಯಲು ಈ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.ಕಾರ್ಯಕ್ರಮದ ಉದ್ಘಾಟನೆಯ ನಂತರ ಎಲ್ಲ ವಿದ್ಯಾರ್ಥಿಗಳನ್ನು ವಿವಿಧ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರಗಳಿಗೆ ಮತ್ತು VRIF ಗಳಿಗೆ ಕರೆದುಕೊಂಡು ಹೋಗಿ ಇಂಟರ್ನ್‌ಶಿಪ್‌ಗಳು ಮತ್ತು ತರಬೇತಿ ಕಾರ್ಯಕ್ರಮಗಳ ಅವಕಾಶಗಳ ಬಗ್ಗೆ ವಿವರಿಸಿದರು.ಬೆಳಗಾವಿ ಪ್ರದೇಶದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 2200ಕ್ಕೂ ಹೆಚ್ಚು 6ನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಟಿಯು ಕುಲಸಚಿವ ಪ್ರೊ.ಬಿ.ಇ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ವಿಟಿಯು ಆರ್ ಆ್ಯಂಡ್‌ ಡಿ ನಿರ್ದೇಶಕ ಪ್ರೊ.ಬಸವಕುಮಾರ ಕೆ.ಜಿ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ಸಾಹಸ ಕಥೆಗಳಿಂದ ನೀವು ಸ್ಫೂರ್ತಿ ಪಡೆಯಬೇಕು. ಯಾರಿಗೆ ಗೊತ್ತು ಒಂದು ದಿನ, ನಿಮ್ಮ ಕಥೆ ಇತರರಿಗೆ ಸ್ಫೂರ್ತಿ ನೀಡಬಹುದು. ಯಶಸ್ಸನ್ನು ಸಾಧಿಸುವ ಕನಸುಗಳನ್ನು ಕಾಣಬೇಕು. ಕನಸುಗಳು ನಾವು ನಿದ್ದೆ ಮಾಡುವಾಗ ನೋಡುವುದಷ್ಟೇ ಅಲ್ಲ. ಇವು ನಮ್ಮ ಭವಿಷ್ಯದ ಜೀವನ ಮತ್ತು ಮಹತ್ವಾಕಾಂಕ್ಷೆಗಳಾಗಿವೆ. ಕನಸುಗಳು ನಮಗೆ ಭರವಸೆ ನೀಡುತ್ತವೆ ಬೆಳೆಯಲು ಪ್ರೇರೇಪಿಸುತ್ತವೆ ಮತ್ತು ಕಠಿಣ ಸಮಯಗಳಲ್ಲಿಯೂ ಸಹ ಮುಂದುವರಿಯಲು ನಮ್ಮನ್ನು ಪ್ರೋತ್ಸಾಹಿಸುತ್ತವೆ. ಇವತ್ತಿನ ವಿದ್ಯಾರ್ಥಿಗಳು ಕೌಶಲ್ಯಭರಿತರಾಗಿ ಅಂತಹ ಸಾಹಸಗಾಥೆಗಳನ್ನ ನೀವು ನಿರ್ಮಾಣ ಮಾಡಬೇಕೆನ್ನುವ ಉದ್ದೇಶದಿಂದ ವಿಟಿಯು ನಲ್ಲಿ ಈ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.

-ಪ್ರೊ.ವಿದ್ಯಾಶಂಕರ್.ಎಸ್,

ವಿಟಿಯು ಕುಲಪತಿ.