ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಎಸ್.ಡಿ.ಬೆನ್ನೂರ

| Published : Mar 02 2025, 01:15 AM IST

ಸಾರಾಂಶ

ತಂಬಾಕು ಸೇವನೆಯಂತಹ ಮಾದಕ ವ್ಯಸನಕ್ಕೆ ಒಳಗಾಗದೆ ಆರೋಗ್ಯ ಪೂರ್ಣ ಜೀವನಕ್ಕಾಗಿ ತಂಬಾಕು ಮುಕ್ತ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಕ್ಷಣಿಕ ಸುಖಕ್ಕಾಗಿ ಮುಂದಿನ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಉಂಟಾಗಲಿದೆ. ಅಂತಹ ಕೆಟ್ಟ ಹವ್ಯಾಸಕ್ಕೆ ಕೈ ಹಾಕದಂತೆ ವಿದ್ಯಾರ್ಥಿಗಳಿಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಆಯೋಜಿಸಿದ್ದ ತಂಬಾಕು ನಿಯಂತ್ರಣದ ಬಗ್ಗೆ ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನೆನಪಿನ ಸ್ಮರಣಿಕೆ ನೀಡಿ ಮಾತನಾಡಿದರು.

ತಂಬಾಕು ಸೇವನೆಯಂತಹ ಮಾದಕ ವ್ಯಸನಕ್ಕೆ ಒಳಗಾಗದೆ ಆರೋಗ್ಯ ಪೂರ್ಣ ಜೀವನಕ್ಕಾಗಿ ತಂಬಾಕು ಮುಕ್ತ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಕ್ಷಣಿಕ ಸುಖಕ್ಕಾಗಿ ಮುಂದಿನ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದರು.

ತಂಬಾಕಿನ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸುವ ಮೂಲಕ ತಂಬಾಕು ಸೇವನೆಯಿಂದ ಅರೋಗ್ಯದ ಮೇಲಾಗುವ ದುಷ್ಪರಿಣಾಮಗಳಿಂದ ಯುವ ಪೀಳಿಗೆ ರಕ್ಷಿಸಿ ಅರಿವನ್ನುಂಟು ಮಾಡಿದರು.

ತಾಲೂಕು ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಜಿ.ಮೋಹನ್ ತಂಬಾಕು ವ್ಯಸನ ಮುಕ್ತ ಕೇಂದ್ರದ ಉಚಿತ ಸೇವಾ ಸೌಲಭ್ಯ ಕುರಿತು ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ.ಚಂದನ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಚಿತ್ರ ಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ಸ್ಫೂರ್ತಿ ಎಸ್.ಕೆ. (ಪ್ರಥಮ), ಮೋನಿಕಾ (ದ್ವಿತೀಯ) ಹಾಗೂ ತೃತೀಯ ಬಿ.ಕಾಂ.ವಿದ್ಯಾರ್ಥಿ ನಂದೀಶ್ ಎಂ.ಎಸ್. (ತೃತೀಯ) ಬಹುಮಾನ ಗಳಿಸಿದರು.

ಈ ವೇಳೆ ಪ್ರಾಂಶುಪಾಲ ಪ್ರಸಾದ ಎಸ್.ಪಿ, ಪ್ರಾಧ್ಯಾಪಕರಾದ ಮೂರ್ತಿ ಐ.ಆರ್, ವಿನಯ ಪ್ರಭು, ಕವಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳಾ ಸೇರಿದಂತೆ ಇತರರು ಇದ್ದರು.