ಕಾನೂನು ದುರ್ಬಳಕೆಯಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಖೊಟ್ಟಿ ಪ್ರಕರಣ ದಾಖಲಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸುಳ್ಳು ಪ್ರಕರಣ ದಾಖಲಿಸುವವರು, ಶಾಮೀಲಾದ ಪೊಲೀಸರು, ಸಾಕ್ಷಿದಾರರು ಎಲ್ಲರಿಗೂ ಶಿಕ್ಷೆಯಾಗಬೇಕು.
ಧಾರವಾಡ:
ಕಾನೂನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣ ದಾಖಲಿಸಿದವರ ಮೇಲೆ ಕಾನೂನು ಕ್ರಮ ಆಗಬೇಕು. ಕಾನೂನು ದುರ್ಬಳಕೆ ತಡೆಯದಿದ್ದರೆ ನ್ಯಾಯಾಂಗ ವ್ಯವಸ್ಥೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಹಾಗೂ ನ್ಯಾಯ ಮಂಟಪ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪೋಕ್ಸೊ ಕಾನೂನು ಕುರಿತು ಉಪನ್ಯಾಸ ನೀಡಿದರು.
ಕಾನೂನು ದುರ್ಬಳಕೆಯಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಖೊಟ್ಟಿ ಪ್ರಕರಣ ದಾಖಲಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸುಳ್ಳು ಪ್ರಕರಣ ದಾಖಲಿಸುವವರು, ಶಾಮೀಲಾದ ಪೊಲೀಸರು, ಸಾಕ್ಷಿದಾರರು ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯಪಟ್ಟರು.೨೦೧೨ರಲ್ಲಿ ಅನುಷ್ಠಾನಗೊಂಡ ಪೋಕ್ಸೊ ಕಾನೂನುನಿಂದ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಿವೆ. ಆದರೆ ಪೋಕ್ಸೊ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಬಹುತೇಕ ಖೊಟ್ಟಿಯಾಗಿವೆ. ವೈಯಕ್ತಿಕ ದ್ವೇಷ, ಆಸ್ತಿ, ಹಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪ್ರಕರಣ ದಾಖಲಿಸಿ ತೊಂದರೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು. ಕಾನೂನನ್ನು ಗುರಾಣಿಯಾಗಿ ಬಳಸಿಕೊಳ್ಳಬೇಕೇ ಹೊರತು ಕತ್ತಿಯಂತೆ ಬಳಸಿಕೊಳ್ಳಬಾರದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹುರಕಡ್ಲಿ ಕಾನೂನು ಪ್ರಾಚಾರ್ಯರಾದ ಡಾ. ಸವಿತಾ ಪಾಟೀಲ ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ವ್ಯಕ್ತಿಗಳ ಮನಸ್ಥಿತಿಯೇ ಮುಖ್ಯ ಕಾರಣವಾಗಿದೆ. ಮನಸ್ಥಿತಿ ಬದಲಾವಣೆಗೆ ಅರಿವು ಮೂಡಿಸಬೇಕು. ಕಾನೂನುಗಳಿಂದ ಎಲ್ಲ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಮನೆಯ ಸದಸ್ಯರಿಂದಲೇ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆದರೆ ಅದನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದೆ ಅನುಭವಿಸುವವರೇ ಹೆಚ್ಚು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ನೇಗಿನಹಾಳ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕಾನೂನು ಮತ್ತು ನ್ಯಾಯ ಮಂಟಪದ ಸಂಚಾಲಕ ಶಿವಾನಂದ ಭಾವಿಕಟ್ಟಿ, ಮಂಗಳಗೌರಿ ಹಿರೇಮಠ, ಗುರುಕಲ್ಮಠ, ಪುಷ್ಪಾ ಒಂಟಿಗೋಡಿ (ಸೋಮಾಪುರ), ಸಂಘದ ಪದಾಧಿಕಾರಿಗಳಾದ ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ, ಡಾ. ಲಿಂಗರಾಜ ಅಂಗಡಿ. ಸಿ.ಎಸ್. ನಾಗಶೆಟ್ಟಿ, ಎಂ. ಸುದರ್ಶನರಾಜ್, ಕೆ.ಎಸ್. ಕೋರಿಶೆಟ್ಟರ, ಸುರೇಶ ಭಂಡಾರಿ, ಮಹಾಂತೇಶ ನರೇಗಲ್ಲ, ಆರ್.ಡಿ. ಗೆದ್ದಣ್ಣವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.