ಮಾದಕ ವ್ಯಸನ ಪ್ರೋತ್ಸಾಹಿಸುವ ಜಾಹೀರಾತುಗಳ ನಿಯಂತ್ರಿಸಬೇಕು

| Published : Jun 01 2024, 12:45 AM IST

ಮಾದಕ ವ್ಯಸನ ಪ್ರೋತ್ಸಾಹಿಸುವ ಜಾಹೀರಾತುಗಳ ನಿಯಂತ್ರಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಉದ್ದಿಮೆಗಳನ್ನು ವೃದ್ದಿ ಮಾಡಿಕೊಳ್ಳಲು ಮಾಲೀಕರು ಯುವಕ, ಯುವತಿಯರನ್ನೇ ಗುರಿಯಾಗಿಸಿಕೊಂಡು ಜಾಹೀರಾತುಗಳ ಮೂಲಕ ಪರ್ಯಾಯವಾಗಿ ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಇದರ ನಿಯಂತ್ರಣಕ್ಕೆ ಬದ್ಧತೆ ತೋರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.

- ವಿಶ್ವ ತಂಬಾಕುರಹಿತ ದಿನ ಕಾರ್ಯಕ್ರಮದಲ್ಲಿ ನ್ಯಾ. ರಾಜೇಶ್ವರಿ ಎನ್. ಹೆಗಡೆ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಉದ್ದಿಮೆಗಳನ್ನು ವೃದ್ದಿ ಮಾಡಿಕೊಳ್ಳಲು ಮಾಲೀಕರು ಯುವಕ, ಯುವತಿಯರನ್ನೇ ಗುರಿಯಾಗಿಸಿಕೊಂಡು ಜಾಹೀರಾತುಗಳ ಮೂಲಕ ಪರ್ಯಾಯವಾಗಿ ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಇದರ ನಿಯಂತ್ರಣಕ್ಕೆ ಬದ್ಧತೆ ತೋರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಕೀಲರ ಸಂಘ, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಪಿ.ಜಿ ಸೆಂಟರ್ ಹಾಗೂ ವಿ.ಎಸ್. ಪ್ಯಾರಾಮೆಡಿಕಲ್ ಕಾಲೇಜ್ ದಾವಣಗೆರೆ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕುರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರಂಭದಲ್ಲಿ ಕೇವಲ ಮೋಜು ಮಸ್ತಿಗಾಗಿ ತಂಬಾಕು, ಮಾದಕ ವಸ್ತುಗಳನ್ನು ತೆಗೆದು ಕೊಳ್ಳಲು ಮುಂದಾಗುತ್ತಾರೆ. ಈ ರೀತಿಯ ಅಭ್ಯಾಸಗಳು ನಂತರದ ದಿನಗಳಲ್ಲಿ ಚಟಗಳಾಗಿ ಪರಿವರ್ತನೆ ಹೊಂದುತ್ತವೆ. ಅದಕ್ಕೆ ದಾಸರಾಗಿ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಾರೆ. ಇಷ್ಟೇ ಅಲ್ಲದೇ ದುರಭ್ಯಾಸಗಳಿಗೆ ದಾಸರಾಗುವ ಯುವಪೀಳಿಗೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ. ಆದ್ದರಿಂದ ಉತ್ತಮ ರೀತಿಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ್ ಮಾತನಾಡಿ, ಹದಿಹರೆಯದವರಲ್ಲೇ ಇತ್ತೀಚಿನ ದಿನಗಳಲ್ಲಿ ತಂಬಾಕು, ಮಾದಕ ವಸ್ತುಗಳ ಸೇವನೆಗೆ ಮುಂದಾಗಿದ್ದಾರೆ. ಜಾಹೀರಾತುಗಳಲ್ಲಿ ತೋರಿಸುವ ವೈಭವೀಕರಣದಿಂದಾಗಿ ಯುವಜನತೆ ದಾರಿ ತಪ್ಪುತ್ತಿದೆ. ತಪ್ಪು ಮಾಡಿದವರು ಯಾರೂ ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನಸಂಖ್ಯೆಗೆ ತಕ್ಕಂತೆ ಅಧಿಕಾರಿಗಳು ಇಲ್ಲದ ಕಾರಣ ನಿಯಂತ್ರಣದಲ್ಲಿ ತಡವಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ ಮಾತನಾಡಿದರು. ಪಾಲಿಕೆ ಆಯುಕ್ತೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ.ರಾಘವನ್, ಅಪರ ಜಿಲ್ಲಾಧಿಕಾರಿ ಸೈಯದಾ ಆಫ್ರೀನ್ ಬಾನು, ಡಿಎಚ್‌ಒ ಡಾ. ಎಸ್.ಷಣ್ಮುಖಪ್ಪ, ಡಾ. ಎಂ.ಬಿ. ನಾಗೇಂದ್ರಪ್ಪ, ಡಾ. ಎಲ್.ಎಂ. ಜ್ಞಾನೇಶ್ವರ ಇತರರು ಇದ್ದರು.

- - - -31ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ವಿಶ್ವ ತಂಬಾಕುರಹಿತ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಉದ್ಘಾಟಿಸಿದರು.