ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಎಳನೀರು ಜ್ಯೂಸ್ ಸೇವಿಸಿ 137ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅಡ್ಯಾರಿನಲ್ಲಿ ಕಾರ್ಯಾಚರಿಸುತ್ತಿರುವ ಎಳನೀರು ಘಟಕ ಹಾಗೂ ಐಸ್‌ಕ್ರೀಂ ಪಾರ್ಲರ್‌ನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಅಸ್ವಸ್ಥತೆಗೆ ಕಾರಣವಾದ ಎಳನೀರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹೇಳಿದ್ದಾರೆ.ತನ್ನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಳನೀರು ಜ್ಯೂಸ್ ಸೇವಿಸಿ ಅಸ್ವಸ್ಥರಾದ ಘಟನೆ ಏ.8ರಂದು ನಡೆದ ಬಗ್ಗೆ ಜಾಲತಾಣಗಳಲ್ಲಿ ಹರಿದಾಡತೊಡಗಿದೆ. ನಮ್ಮ ಗಮನಕ್ಕೆ ಏ.10ರಂದು ಬಂದಿದ್ದು, ಅಂದೇ ಆಹಾರ ಇಲಾಖೆ ಅಧಿಕಾರಿಗಳ ಜತೆ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ 15 ಲೀಟರ್ ಎಳನೀರಿನ ಜ್ಯೂಸ್‌ನ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೂಡಲೇ ಘಟಕ ಬಂದ್ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರದಲ್ಲಿ ಪ್ರಯೋಗಾಲಯದಿಂದ ವರದಿ ಬರುವ ನಿರೀಕ್ಷೆ ಇದೆ ಎಂದರು. ಕಾಲರಾ ಇಲ್ಲ: ಅಸ್ವಸ್ಥಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲಾಗಿದೆ. ಬಹುತೇಕ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಓರ್ವರನ್ನು ಮಾತ್ರ ನಿಗಾದಲ್ಲಿ ಇರಿಸಲಾಗಿದೆ. ಅಸ್ವಸ್ಥಗೊಂಡವರ ಎಲ್ಲ ರೀತಿಯ ಪರೀಕ್ಷೆ ನಡೆಸಲಾಗಿದ್ದು, ಕಾಲರಾ ಪತ್ತೆಯಾಗಿಲ್ಲ ಎಂದು ಡಾ.ತಿಮ್ಮಯ್ಯ ಸ್ಪಷ್ಟಪಡಿಸಿದರು.
ಪ್ರಸಕ್ತ ಮಂಗಳೂರಲ್ಲಿ 56, ಬಂಟ್ವಾಳ 73, ಪುತ್ತೂರು 8 ಹಾಗೂ ಕಡಬ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆಗೆ ದಾಖಲಾಗಿದ್ದರು. ಇನ್ನಷ್ಟು ಮಂದಿ ಅಸ್ವಸ್ಥಗೊಂಡವರು ಇದ್ದರೆ ಚಿಕಿತ್ಸೆಗೆ ದಾಖಲಾಗಲು ಅವಕಾಶ ಇದೆ. ಈ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ ಎಂದರು.ಘಟನೆ ನಡೆದ ದಿನದಂದು ಎಳನೀರು ಜ್ಯೂಸ್ ಕುಡಿದವರು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಉಳಿದವರಿಗೆ ಏನೂ ಆಗಿಲ್ಲ. ಈ ಘಟನೆಗೆ ಕಾರಣ ಏನು? ಯಾರಾದರೂ ವೃತ್ತಿ ದ್ವೇಷದಲ್ಲಿ ವಿಷಪ್ರಾಶನ ಮಾಡಿದರೇ ಅಥವಾ ಸಿಬ್ಬಂದಿಯ ಎಡವಟ್ಟೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮೊದಲ ಹಂತದ ತನಿಖೆ ಪ್ರಕಾರ, ಅಲ್ಲಿ ಸಾಮಾನ್ಯವಾಗಿ ಎಳನೀರು ಜ್ಯೂಸ್‌ಗೆ ಕಲಬೆರಕೆ ಮಾಡುವುದಿಲ್ಲ. ರಾಸಾಯನಿಕ ಬಳಕೆಯೂ ಇಲ್ಲ. ಪ್ರತಿ ವರ್ಷ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ತಪ್ಪು ಕಂಡುಬಂದರೆ ಆಹಾರ ನಿಯಂತ್ರಕರಿಗೆ ದೂರು ಸಲ್ಲಿಸಬೇಕಾಗುತ್ತದೆ. 5 ಲಕ್ಷ ರು. ವರೆಗೆ ದಂಡ ವಿಧಿಸುವ ಅವಕಾಶ ಇದೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))