ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಮುಖ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ 16ನೇ ಆವೃತ್ತಿ 2027ರ ಫೆ. 8 ರಿಂದ 12 ರವರೆಗೆ ನಗರದ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಜರುಗಲಿದೆ.

-ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಮುಖ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ 16ನೇ ಆವೃತ್ತಿ 2027ರ ಫೆ. 8 ರಿಂದ 12 ರವರೆಗೆ ನಗರದ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಜರುಗಲಿದೆ.

ಐದು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ಪ್ರದರ್ಶಕರು ಮತ್ತು ವೀಕ್ಷಕರ ಅನುಕೂಲಕ್ಕಾಗಿ ರಕ್ಷಣಾ ಸಚಿವಾಲಯ ಏರೋ ಇಂಡಿಯಾ 2027 ಎಂಬ ಪ್ರತ್ಯೇಕ ವೆಬ್ ಪೋರ್ಟಲ್ ಪ್ರಾರಂಭಿಸಿದೆ. ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ನೋಂದಣಿ ಮತ್ತು ಪ್ರದರ್ಶನ ಸ್ಥಳಾವಕಾಶದ ಬುಕಿಂಗ್ ಗುರುವಾರ ಆರಂಭವಾಗಿದೆ. ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯು ಆಯೋಜಿಸಿರವ ಐದು ದಿನಗಳ ವೈಮಾನಿಕ ಪ್ರದರ್ಶನದಲ್ಲಿ ಜಾಗತಿಕ ಮಟ್ಟದ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳು, ನೀತಿ ನಿರೂಪಕರು, ತಂತ್ರಜ್ಞಾನ ತಜ್ಞರು, ನಾವೀನ್ಯತೆಗಾರರು, ಉದ್ಯಮ ಪ್ರತಿನಿಧಿಗಳು ಹಾಗೂ ರಕ್ಷಣಾ ಸಿಬ್ಬಂದಿ ಭಾಗವಹಿಸಲಿದ್ದಾರೆ.

ಈ ಐದು ದಿನಗಳ ಪ್ರದರ್ಶನದ ವೇಳೆ ಭಾರತೀಯ ವಾಯುಪಡೆ ಹಾಗೂ ಅಂತಾರಾಷ್ಟ್ರೀಯ ವೈಮಾನಿಕ ತಂಡಗಳು ರೋಮಾಂಚಕ ವೈಮಾನಿಕ ಪ್ರದರ್ಶನಗಳನ್ನು ನೀಡಲಿವೆ.

ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ಈ ಆವೃತ್ತಿಯು ಮತ್ತಷ್ಟು ವೇಗ ನೀಡಲಿದ್ದು, ಜಾಗತಿಕ ರಕ್ಷಣಾ ಸಾಮಗ್ರಿಗಳ ಪೂರೈಕೆ ಜಾಲದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ. ಜೊತೆಗೆ, ಭಾರತೀಯ ರಕ್ಷಣಾ ಉದ್ಯಮಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಸ್ಟಾರ್ಟ್‌ಅಪ್‌ಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.